ಶ್ರೀಲಂಕಾ ನೌಕಾಪಡೆಯಿಂದ 102 ರೊಹಿಂಗ್ಯಾ ನಿರಾಶ್ರಿತರ ರಕ್ಷಣೆ
ಕೊಲಂಬೊ : ಶ್ರೀಲಂಕಾದ ಪೂರ್ವ ಕರಾವಳಿ ಬಳಿ ಹಿಂದು ಮಹಾಸಾಗರದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ದೋಣಿಯಿಂದ 102 ರೊಹಿಂಗ್ಯಾ ನಿರಾಶ್ರಿತರನ್ನು ರಕ್ಷಿಸಿದ್ದು ಅವರನ್ನು ಸುರಕ್ಷಿತವಾಗಿ ಬಂದರಿಗೆ ಕರೆತರಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ಶುಕ್ರವಾರ ಹೇಳಿದೆ.
25 ಮಕ್ಕಳನ್ನು ಒಳಗೊಂಡಿದ್ದ ನಿರಾಶ್ರಿತರ ತಂಡವಿದ್ದ ಟ್ರಾಲರ್ ಬೋಟು ಉತ್ತರದ ಮುಲ್ಲಿವೈಯಾಕಲ್ ಕರಾವಳಿ ಬಳಿ ಅತಂತ್ರ ಸ್ಥಿತಿಯಲ್ಲಿ ಇರುವುದನ್ನು ಗುರುವಾರ ಮೀನುಗಾರರ ದೋಣಿ ಪತ್ತೆಹಚ್ಚಿದೆ.
ಭಾಷೆಯ ಸಮಸ್ಯೆಯಿಂದಾಗಿ ನಿರಾಶ್ರಿತರು ಎಲ್ಲಿಗೆ ಪ್ರಯಾಣಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಮ್ಯಾನ್ಮಾರ್ ನಿಂದ ಪಲಾಯನ ಮಾಡಿರುವ ರೊಹಿಂಗ್ಯಾ ನಿರಾಶ್ರಿತರು ಎಂಬುದು ತಿಳಿದುಬಂದಿದೆ.
ಇತ್ತೀಚಿನ ಚಂಡಮಾರುತದಿಂದಾಗಿ ದೋಣಿ ಕಡಲ ತೀರದತ್ತ ಚಲಿಸಿರಬಹುದು. ನಿರಾಶ್ರಿತರನ್ನು ಟ್ರಿಂಕೋಮಲಿ ಬಂದರಿಗೆ ಕರೆದೊಯ್ದು ಆಹಾರ, ನೀರು ಒದಗಿಸಲಾಗಿದೆ. ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಅವರು ಪ್ರಯಾಣ ಮುಂದುವರಿಸಬಹುದು ಎಂದು ಶ್ರೀಲಂಕಾ ನೌಕಾಪಡೆಯ ವಕ್ತಾರರು ಹೇಳಿದ್ದಾರೆ.