ಇಸ್ರೇಲ್ ಸೈನಿಕರಿಂದ ಗಾಝಾದಲ್ಲಿ ಫೆಲೆಸ್ತೀನೀಯರ ವಿವೇಚನಾರಹಿತ ಹತ್ಯೆ : ಇಸ್ರೇಲ್ ಮಾಧ್ಯಮದ ಆರೋಪ
ಜೆರುಸಲೇಂ : ಗಾಝಾದ ನೆಟ್ ಝಾರಿಮ್ ಕಾರಿಡಾರ್ ನಲ್ಲಿ ಇಸ್ರೇಲಿ ಸೈನಿಕರು ಫೆಲೆಸ್ತೀನ್ ನಾಗರಿಕರನ್ನು ವಿವೇಚನಾ ರಹಿತವಾಗಿ ಹತ್ಯೆ ಮಾಡುತ್ತಿದ್ದಾರೆ ಎಂದು ಅನಾಮಧೇಯ ಯೋಧನನ್ನು ಉಲ್ಲೇಖಿಸಿ ಇಸ್ರೇಲ್ ನ ಪ್ರಮುಖ ಪತ್ರಿಕೆಯೊಂದು ಶುಕ್ರವಾರ ವರದಿ ಮಾಡಿದೆ.
ಆದರೆ ಇಸ್ರೇಲ್ ಮಿಲಿಟರಿ ಈ ವರದಿಯನ್ನು ನಿರಾಕರಿಸಿದೆ. ಗಾಝಾ ಪಟ್ಟಿಯಲ್ಲಿ ಕಾರ್ಯನಿರ್ವಹಿಸುವ ಕಮಾಂಡರ್ ಗಳಿಗೆ ಅಸಾಧಾರಣ ಅಧಿಕಾರವನ್ನು ನೀಡಲಾಗಿದೆ ಎಂದು ಯೋಧರು, ಅಧಿಕಾರಿಗಳು ಹಾಗೂ ಮೀಸಲು ಪಡೆಯ ಸಿಬ್ಬಂದಿಗಳನ್ನು ಉಲ್ಲೇಖಿಸಿ ಎಡ ಪಂಥೀಯ ವಿಚಾರಧಾರೆಯ `ಹಾರೆಟ್ಝ್' ದಿನಪತ್ರಿಕೆ ವರದಿ ಮಾಡಿದೆ.
ನೆಟ್ ಝಾರಿಮ್ ಕಾರಿಡಾರ್ ನಲ್ಲಿ ನಿಶ್ಯಸ್ತ್ರ ಮಹಿಳೆಯರು, ಮಕ್ಕಳು ಮತ್ತು ಪುರುಷರನ್ನು ಹತ್ಯೆ ಮಾಡಲು ಕಮಾಂಡರ್ ಗಳು ಆದೇಶಿಸಿದ್ದಾರೆ ಅಥವಾ ಅವಕಾಶ ಮಾಡಿಕೊಟ್ಟಿದ್ದಾರೆಂದು ಯೋಧರು ಹೇಳಿರುವುದಾಗಿ ಪತ್ರಿಕೆಯ ವರದಿ ಉಲ್ಲೇಖಿಸಿದೆ.
ಗಾಝಾದಾದ್ಯಂತ ಹರಡಿರುವ 7 ಕಿ.ಮೀ ಅಗಲದ ನೆಟ್ ಝಾರಿಮ್ ಭೂಪ್ರದೇಶವನ್ನು ಮಿಲಿಟರಿ ವಲಯವನ್ನಾಗಿ ಪರಿವರ್ತಿಸಲಾಗಿದೆ.
ಒಂದು ಘಟನೆಯಲ್ಲಿ ಕಮಾಂಡರ್ ಒಬ್ಬರು 200 ಸಶಸ್ತ್ರ ಹೋರಾಟಗಾರರನ್ನು ಹತ್ಯೆ ಮಾಡಿರುವುದಾಗಿ ಘೋಷಿಸಿದ್ದರು. ಆದರೆ ವಾಸ್ತವವಾಗಿ ಕೇವಲ 10 ಮಂದಿ ಮಾತ್ರ ಹಮಾಸ್ ಸದಸ್ಯರಾಗಿದ್ದರು. ನೆಟ್ ಝಾರಿಮ್ ಕಾರಿಡಾರ್ ಗೆ ಯಾರು ಪ್ರವೇಶಿಸಿದರೂ ಹಿಂದೆ ಮುಂದೆ ನೋಡದೆ ಗುಂಡು ಹಾರಿಸುವಂತೆ ತಮಗೆ ಆದೇಶವಿತ್ತು. ಕಾರಿಡಾರ್ ನ ಗಡಿಯನ್ನು ದಾಟುವವರನ್ನು ಬಂಡುಕೋರರು ಎಂದು ಪರಿಗಣಿಸಬೇಕು. ನಾಗರಿಕರು ಎಂಬ ವಿನಾಯಿತಿ ಬೇಡ. ಎಲ್ಲರೂ ಬಂಡುಕೋರರೇ' ಎಂದು ಬೆಟಾಲಿಯನ್‍ನ ಕಮಾಂಡರ್ ಹೇಳಿರುವುದಾಗಿ ಯೋಧರು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಯಾವುದೇ ಕಟ್ಟಡಗಳ ಮೇಲೆ ಬಾಂಬ್ ಹಾಕಲು ಅಥವಾ ವೈಮಾನಿಕ ದಾಳಿ ನಡೆಸಬೇಕಿದ್ದರೆ ಸೇನೆಯ ಉನ್ನತ ಅಧಿಕಾರಿಗಳ ಅನುಮತಿ ಬೇಕಿತ್ತು. ಆದರೆ ನೆಟ್ ಝಾರಿಮ್ ಕಾರಿಡಾರ್ ನಲ್ಲಿ ವಿಭಾಗೀಯ ಕಮಾಂಡರ್ ಗೆ ವಿಸ್ತರಿತ ಅಧಿಕಾರವಿತ್ತು ಎಂದು ಯೋಧರನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಆರೋಪವನ್ನು ಮಿಲಿಟರಿ ನಿರಾಕರಿಸಿದ್ದು `ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಪಡೆಗಳು ನಡೆಸುವ ಎಲ್ಲಾ ಚಟುವಟಿಕೆಗಳು ಹಾಗೂ ಕಾರ್ಯಾಚರಣೆಗಳು ರಚನಾತ್ಮಕ ಯುದ್ಧ ಕಾರ್ಯವಿಧಾನಗಳು, ಯೋಜನೆ ಮತ್ತು ಕಾರ್ಯಾಚರಣೆಯ ಆದೇಶಗಳು ಸೇನೆಯ ಉನ್ನತ ಅಧಿಕಾರಿಯಿಂದ ನಡೆಸಲ್ಪಡುತ್ತದೆ' ಎಂದು ಹೇಳಿದೆ. ನೆಟ್ ಝಾರಿಮ್ ಕಾರಿಡಾರ್ ನಲ್ಲಿ ನಡೆಸಿರುವ ಎಲ್ಲಾ ದಾಳಿಗಳೂ ಕಡ್ಡಾಯ ಕಾರ್ಯವಿಧಾನಗಳು ಮತ್ತು ಕಾನೂನಿಗೆ ಅನುಗುಣವಾಗಿ ನಡೆಸಲ್ಪಟ್ಟಿದೆ. ಪದಾತಿ ಪಡೆಗೆ ಹೆಚ್ಚಿನ ಬೆದರಿಕೆ ಇರುವ ಸಂದರ್ಭದಲ್ಲಿ ತುರ್ತು ದಾಳಿ ನಡೆಸುವ ಸಮಯದಲ್ಲೂ ಈ ಶಿಷ್ಟಾಚಾರಗಳನ್ನು ಪಾಲಿಸಲಾಗಿದೆ. ಐಡಿಎಫ್(ಇಸ್ರೇಲ್ ಭದ್ರತಾ ಪಡೆ)ನ ಆದೇಶಗಳು ಅಥವಾ ನೈತಿಕ ಮಾನದಂಡಗಳನ್ನು ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿಬಂದಾಗ ಆ ಬಗ್ಗೆ ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಇಸ್ರೇಲ್ ನ ರಕ್ಷಣಾ ಇಲಾಖೆ ಹೇಳಿದೆ.
ಗಾಝಾದಲ್ಲಿನ ಯುದ್ಧದ ನೈಜ ಸ್ವರೂಪವನ್ನು ಮತ್ತು ಗಾಝಾದಲ್ಲಿ ಕೆಲವು ಕಮಾಂಡರ್ ಗಳು ಮತ್ತು ಅಧಿಕಾರಿಗಳು ಯಾವ ಗಂಭೀರ ಕೃತ್ಯಗಳನ್ನು ಮಾಡಿದ್ದಾರೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು ಎಂಬ ಉದ್ದೇಶ ತಮ್ಮದಾಗಿದೆ ಎಂದು ಯೋಧರು ಹೇಳಿರುವುದಾಗಿ ಪತ್ರಿಕೆಯ ವರದಿ ಉಲ್ಲೇಖಿಸಿದೆ.
► `ಗಾಝಾದಲ್ಲಿ ಯಾವುದೇ ಅಮಾಯಕರಿಲ್ಲ':
ಹೆಚ್ಚಿನ ಯೋಧರು ಕಳೆದ ಬೇಸಿಗೆಯಲ್ಲಿ ನೆಟ್ ಝಾರಿಮ್ ಕಾರಿಡಾರ್ ನಲ್ಲಿ ಕಾರ್ಯ ನಿರ್ವಹಿಸುವ 252 ಬೆಟಾಲಿಯನ್ ನ ಉಸ್ತುವಾರಿ ವಹಿಸಿಕೊಂಡಿರುವ ಬ್ರಿಗೇಡಿಯರ್ ಜನರಲ್ ಯೆಹೂದ ವ್ಯಾಚ್ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.
ಗಾಝಾದಲ್ಲಿ ಯಾವುದೇ ಅಮಾಯಕರಿಲ್ಲ ಎಂದು ಬ್ರಿ|ಜ| ವ್ಯಾಚ್ ನಿರಂತರ ಹೇಳುತ್ತಿದ್ದರು ಎಂದು ವರದಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಸೇನೆ `ಈ ಹೇಳಿಕೆ ಅವರದಲ್ಲ. ಆದರೆ ಅವರ ಮೇಲೆ ಆರೋಪಿಸಲಾಗಿದೆ. ಇಂತಹ ವರದಿ ಸಂಪೂರ್ಣ ಆಧಾರ ರಹಿತವಾಗಿದೆ' ಎಂದಿದೆ.
ಈ ಸಾಕ್ಷ್ಯಗಳು ಅಸಾಮಾನ್ಯ ಯುದ್ಧಾಪರಾಧ ಮತ್ತು ಪೂರ್ಣ ಪ್ರಮಾಣದ ಜನಾಂಗೀಯ ಶುದ್ಧೀಕರಣ ಕಾರ್ಯಾಚರಣೆಯ ಹೊಸ ಪುರಾವೆಗಳನ್ನು ಮುಂದಿರಿಸಿದೆ ಎಂದು ಹಮಾಸ್ ಪ್ರತಿಕ್ರಿಯಿಸಿದೆ.