ನೈಜೀರಿಯಾ | ಕಾಲ್ತುಳಿತಕ್ಕೆ 35 ಮಕ್ಕಳು ಬಲಿ
ಅಬುಜಾ : ನೈಜೀರಿಯಾದಲ್ಲಿ ಬುಧವಾರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 35 ಮಕ್ಕಳು ಸಾವನ್ನಪ್ಪಿದ್ದು ಇತರ 6 ಮಂದಿ ಗಾಯಗೊಂಡಿರುವುದಾಗಿ ಪೊಲೀಸರನ್ನು ಉಲ್ಲೇಖಿಸಿ ಸಿಎನ್‍ಎನ್ ಶುಕ್ರವಾರ ವರದಿ ಮಾಡಿದೆ.
ಇಬಾದಾನ್ ನಗರದ ಇಸ್ಲಾಮಿಕ್ ಶಾಲೆಯಲ್ಲಿ ನಡೆದಿರುವ ದುರಂತಕ್ಕೆ ಸಂಬಂಧಿಸಿ ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರ ಸಹಿತ 8 ಮಂದಿಯನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
`ವುಮೆನ್ ಇನ್ ನೀಡ್ ಆಫ್ ಗೈಡೆನ್ಸ್ ಆ್ಯಂಡ್ ಸಪೋರ್ಟ್(ವಿಂಗ್)' ಎಂಬ ಹೆಸರಿನ ಸಂಸ್ಥೆಯು ಪ್ರಾಯೋಜಿಸಿದ್ದ ಕಾರ್ಯಕ್ರಮದಲ್ಲಿ 13 ವರ್ಷಕ್ಕಿಂತ ಕೆಳಗಿನ ಸುಮಾರು 5000 ಮಕ್ಕಳು ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಕೆಲವು ವಿನೋದ ಆಟಗಳನ್ನು ನಡೆಸಿ ಗೆದ್ದ ಮಕ್ಕಳಿಗೆ ಸ್ಕಾಲರ್ ಶಿಪ್ ಸೇರಿದಂತೆ ಆಕರ್ಷಕ ಬಹುಮಾನ ನೀಡಲಾಗುತ್ತದೆ.
ದುರಂತದ ಬಗ್ಗೆ ಸಂತಾಪ ಸೂಚಿಸಿರುವ ಅಧ್ಯಕ್ಷ ಬೊಲಾ ಟಿನುಬು, ಘಟನೆಯ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ `ನಾನ್ ನ್ಯೂಸ್' ವರದಿ ಮಾಡಿದೆ.