ರಶ್ಯದ ಜನವಸತಿ ಕಟ್ಟಡಗಳಿಗೆ ಉಕ್ರೇನ್ ಸರಣಿ ಡ್ರೋನ್ ದಾಳಿ

Update: 2024-12-21 17:22 GMT

Photo : x/the_hindu

ಮಾಸ್ಕೋ : ಅಮೆರಿಕದಲ್ಲಿ 2001ರ ಸೆಪ್ಟಂಬರ್ 11ರಂದು ನಡೆದಿದ್ದ ಭಯೋತ್ಪಾದಕ ದಾಳಿಯ ಶೈಲಿಯಲ್ಲಿ ರಶ್ಯದ ಹೃದಯ ಭಾಗದಲ್ಲಿರುವ ಕಝಾನ್ ನಗರದ ಬಹುಅಂತಸ್ತಿನ ಕಟ್ಟಡವೊಂದನ್ನು ಗುರಿಯಾಗಿಸಿ ಶನಿವಾರ ಉಕ್ರೇನ್ ಸರಣಿ ಡ್ರೋನ್ ದಾಳಿ ನಡೆಸಿರುವುದಾಗಿ ರಶ್ಯದ ರಕ್ಷಣಾ ಇಲಾಖೆ ಹೇಳಿದೆ.

ಟಾರ್ಸ್ತಾನ್ ಗಣರಾಜ್ಯದ ರಾಜಧಾನಿ ಕಝಾನ್ ನಗರವನ್ನು ಗುರಿಯಾಗಿಸಿಕೊಂಡು ಶನಿವಾರ ಬೆಳಿಗ್ಗೆ ನಡೆದ ಸರಣಿ ಡ್ರೋನ್ ದಾಳಿ ಹಲವಾರು ವಸತಿ ಕಟ್ಟಡಗಳನ್ನು ಹಾನಿಗೊಳಿಸಿದೆ ಮತ್ತು ಹತ್ತಿರದ ಎರಡು ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ.

ರಾಜಧಾನಿ ಮಾಸ್ಕೋದಿಂದ ಪೂರ್ವಕ್ಕೆ ಸುಮಾರು 800 ಕಿ.ಮೀ ದೂರದಲ್ಲಿರುವ ಕಝಾನ್ ನಗರದ ಮೇಲೆ ಸ್ಥಳೀಯ ಕಾಲಮಾನ ಬೆಳಿಗ್ಗೆ 7:40ರಿಂದ 9.20ರ ನಡುವೆ 3 ಹಂತದಲ್ಲಿ 8 ಡ್ರೋನ್ ಗಳನ್ನು ಬಳಸಿ ದಾಳಿ ನಡೆಸಲಾಗಿದೆ. 3 ಡ್ರೋನ್ ಗಳು ಜನವಸತಿ ಕಟ್ಟಡಕ್ಕೆ ಅಪ್ಪಳಿಸಿದರೆ, ಒಂದು ಕೈಗಾರಿಕಾ ಸಂಸ್ಥೆಗೆ ಅಪ್ಪಳಿಸಿದೆ. ಮತ್ತೊಂದು ಡ್ರೋನ್ ಅನ್ನು ನದಿಯ ಮೇಲ್ಭಾಗದಲ್ಲಿ ಹೊಡೆದುರುಳಿಸಲಾಗಿದೆ.

ಮೂರು ಡ್ರೋನ್ ಗಳನ್ನು ವಿದ್ಯುನ್ಮಾನ ಯುದ್ಧ ವ್ಯವಸ್ಥೆಗಳನ್ನು ಬಳಸಿಕೊಂಡು ತಟಸ್ಥಗೊಳಿಸಲಾಗಿದೆ ಎಂದು ಸರಕಾರದ ಮಾಧ್ಯಮ ವಕ್ತಾರರು ಶನಿವಾರ ಮಾಹಿತಿ ನೀಡಿದ್ದಾರೆ. ಬಹುಮಹಡಿ ಕಟ್ಟಡದ ತುದಿಯ ಅಂತಸ್ತಿನತ್ತ ಡ್ರೋನ್ ಹಾರಾಟ ನಡೆಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶುಕ್ರವಾರ ರಶ್ಯದ ಗಡಿಭಾಗದ ಗ್ರಾಮದ ಮೇಲೆ ಅಮೆರಿಕ ಒದಗಿಸಿದ ಕ್ಷಿಪಣಿಗಳನ್ನು ಬಳಸಿ ಉಕ್ರೇನ್ ನಡೆಸಿದ್ದ ದಾಳಿಯಲ್ಲಿ ಮಗು ಸಹಿತ 6 ಮಂದಿ ಮೃತಪಟ್ಟಿದ್ದರು.

ಇದು ಅನಿರೀಕ್ಷಿತ, ಅಸಾಮಾನ್ಯ ದಾಳಿಯಾಗಿದ್ದು ಕಟ್ಟಡದ ನಿವಾಸಿಗಳನ್ನು ತೆರವುಗೊಳಿಸಿ ತಾತ್ಕಾಲಿಕ ಆಶ್ರಯ ತಾಣಕ್ಕೆ ಸ್ಥಳಾಂತರಿಸಲಾಗಿದೆ. ಎರಡು ಜನವಸತಿ ಕಟ್ಟಡಗಳ ಮೇಲೆ ದಾಳಿ ನಡೆದಿದ್ದು ದಾಳಿಯ ಬಳಿಕ ಕಾಣಿಸಿಕೊಂಡ ಬೆಂಕಿಯನ್ನು ಅಗ್ನಿಶಾಮಕ ದಳ ನಿಯಂತ್ರಿಸಿದೆ. ಕಟ್ಟಡದ ಗಾಜುಗಳಿಗೆ ಹಾನಿಯಾಗಿದೆ.

ದಾಳಿಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ. ಕಝಾನ್ ವಿಮಾನ ನಿಲ್ದಾಣದಿಂದ ವಿಮಾನಗಳ ಆಗಮನ-ನಿರ್ಗಮನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಶನಿವಾರ ಮತ್ತು ರವಿವಾರ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ರಶ್ಯದ ಅಧಿಕಾರಿಗಳು ಹೇಳಿದ್ದಾರೆ.

► ರಶ್ಯದಿಂದ 113 ಡ್ರೋನ್ ದಾಳಿ

ಶುಕ್ರವಾರ ತಡರಾತ್ರಿ ರಶ್ಯವು ಉಕ್ರೇನ್ ಪ್ರದೇಶದತ್ತ 113 ಡ್ರೋನ್ ಗಳನ್ನು ಪ್ರಯೋಗಿಸಿದ್ದು ಇದರಲ್ಲಿ 57 ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ. ಉಳಿದ 56 ಡ್ರೋನ್ ಗಳು ತಾಂತ್ರಿಕ ವೈಫಲ್ಯದಿಂದ ಪತನಗೊಂಡಿವೆ. ರಶ್ಯವು ಮಧ್ಯ ಉಕ್ರೇನ್ ನತ್ತ ಎಸ್-400 ಕ್ಷಿಪಣಿಯನ್ನು ಪ್ರಯೋಗಿಸಿದ್ದು ಯಾವುದೇ ಹಾನಿಯಾಗಿಲ್ಲ ಎಂದು ಉಕ್ರೇನ್ ವಾಯುಪಡೆ ಹೇಳಿದೆ.

ಈ ಮಧ್ಯೆ, ಪೂರ್ವ ಉಕ್ರೇನ್ ನ ಡೊನೆಟ್ಸ್ ಪ್ರಾಂತವನ್ನು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿ ರಶ್ಯಕ್ಕೆ ಮಹತ್ವದ ಮುನ್ನಡೆ ಲಭಿಸಿದ್ದು ಕುರಖೋವ್ ಗ್ರಾಮವನ್ನು ಸುತ್ತುವರಿದಿವೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News