ಇರಾನ್ ಅಣ್ವಸ್ತ್ರ ಕಾರ್ಯಕ್ರಮ ಕೈಬಿಡದಿದ್ದರೆ ಮಿಲಿಟರಿ ದಾಳಿ: ಟ್ರಂಪ್ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ | PC : NDTV
ವಾಶಿಂಗ್ಟನ್: ಒಂದು ವೇಳೆ ಇರಾನ್ ಅಣ್ವಸ್ತ್ರ ಹೊಂದುವ ಚಟುವಟಿಕೆಗಳನ್ನು ಕೈಬಿಡದೆ ಇದ್ದಲ್ಲಿ ಅದರ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಲು ಹಿಂಜರಿಯು ವುದಿಲ್ಲವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಇರಾನ್ ಉದ್ದೇಶಪೂರ್ವಕವಾಗಿ ಅಣು ಒಪ್ಪಂದವನ್ನು ವಿಳಂಬಿಸುತ್ತಿದೆ ಹಾಗೂ ಅದು ಅಣ್ವಸ್ತ್ರವನ್ನು ಅಭಿವೃದ್ಧಿಪಡಿಸುವ ಸನಿಹಕ್ಕೆ ಬಂದಿದೆಯೆಂದು ಅವರು ಹೇಳಿದ್ದಾರೆ.
ಅಮೆರಿಕದ ಜೊತೆ ಅಣುಶಕ್ತಿ ಒಪ್ಪಂದವನ್ನ್ನು ಅಂತಿಮಗೊಳಿಸುವತ್ತ ಇರಾನ್ ಸಮೀಪಿಸುತ್ತಿರುವಂತೆಯೇ, ವಾಶಿಂಗ್ಟನ್ ಈ ಎಚ್ಚರಿಕೆ ನೀಡಿರುವುದು ಗಮನಾರ್ಹವಾಗಿದೆ.
ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್ ಅಣ್ವಸ್ತ್ರ ಹೊಂದು ಪರಿಕಲ್ಪನೆಯನ್ನು ಕೈಬಿಡಬೇಕು’’ ಎಂದು ಟ್ರಂಪ್ ಕರೆ ನೀಡಿದರು.
ಒಂದು ವೇಳೆ ಅಣ್ವಸ್ತ್ರ ಕಾರ್ಯಕ್ರಮವನ್ನು ಇರಾನ್ ಕೈಬಿಡದೆ ಇದ್ದಲ್ಲಿ ಆ ದೇಶದ ಅಣುಸಂಸ್ಥಾಪನೆಗಳ ಮೇಲೆ ಅಮೆರಿಕವು ಮಿಲಿಟರಿ ದಾಳಿ ನಡೆಸುವುದೇ ಎಂಬ ಪ್ರಶ್ನೆಗೆ ಅವರು, ‘ಹೌದು’ ಎಂದು ಉತ್ತರಿಸಿದರು.
ಆದರೆ ತಾನು ಅಣ್ವಸ್ತ್ರಗಳನ್ನು ಹೊಂದಲು ಪ್ರಯತ್ನಿಸುತ್ತಿದ್ದೇನೆಂಬ ಆರೋಪಗಳನ್ನು ಇರಾನ್ ಬಲವಾಗಿ ಅಲ್ಲಗಳೆಯುತ್ತಾ ಬಂದಿದೆ.
ಓಮಾನ್ ನಲ್ಲಿ ತಾವಿಬ್ಬರೂ ಸಕಾರಾತ್ಮಕ ಹಾಗೂ ರಚನಾತ್ಮಕ ಮಾತುಕತೆಗಳನ್ನು ನಡೆಸಿರುವುದಾಗಿ ಇರಾನ್ ಹಾಗೂ ಅಮೆರಿಕ ದೇಶಗಳೆರಡೂ ತಿಳಿಸಿವೆ. ಎರಡನೇ ಸುತ್ತಿನ ಮಾತುಕತೆಯು ರೋಮ್‌ನಲ್ಲಿ ನಡೆಯಲಿದೆ.
ಈ ಮಧ್ಯೆ ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಆರಾಗಾಚಿ ಅವರು ಈ ವಾರ ರಶ್ಯಕ್ಕೆ ಭೇಟಿ ನೀಡಲಿದ್ದು, ಅಮೆರಿಕದ ಜೊತೆ ತನ್ನ ದೇಶದ ಅಣುಶಕ್ತಿ ಕಾರ್ಯಕ್ರಮದ ಕುರಿತು ಚರ್ಚಿಸಲಿದ್ದಾರೆ. ಇರಾನ್ ನ ನಿಕಟಮಿತ್ರನಾದ ರಶ್ಯಾವು 2015ರ ಅಣುಶಕ್ತಿ ಒಪ್ಪಂದದ ಪಾಲುದಾರನಾಗಿದೆ. ಅಣುಶಕ್ತಿ ಕಾರ್ಯಕ್ರಮದ ಕುರಿತಾಗಿ ಟೆಹರಾನ್ ಇತ್ತೀಚಿನ ವಾರಗಳಲ್ಲಿ ಮಾತುಕತೆಯಲ್ಲಿ ತೊಡಗಿದೆ.