ನಾಲ್ಕು ವರ್ಷಗಳಲ್ಲಿ ಮೊದಲ ಬಾರಿಗೆ ಬಡ್ಡಿದರ ಕಡಿತಗೊಳಿಸಿದ ಅಮೆರಿಕ ಫೆಡ್ ಬ್ಯಾಂಕ್
ಹೊಸದಿಲ್ಲಿ: ನಾಲ್ಕು ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ ಯುಎಸ್ ಫೆಡರಲ್ ರಿಸರ್ವ್ ಬುಧವಾರ ಬಡ್ಡಿದರಗಳನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿದೆ.
"ಹಣದುಬ್ಬರ ಹೆಚ್ಚಳದ ಹಿನ್ನೆಲೆಯಲ್ಲಿ ಮತ್ತು ಸಮತೋಲದ ಅಪಾಯ ಸಾಧ್ಯತೆ ಹಿನ್ನೆಲೆಯಲ್ಲಿ ಫೆಡರಲ್ ಫಂಡ್ ಬಡ್ಡಿದರವನ್ನು ಶೇಕಡ ಅರ್ಧದಷ್ಟು ಇಳಿಕೆ ಮಾಡಲಾಗಿದೆ" ಎಂದು ಫೆಡರಲ್ ಮುಕ್ತ ಮಾರುಕಟ್ಟೆ ಸಮಿತಿ (ಎಫ್ಓಎಂಸಿ) ಪ್ರಕಟಿಸಿದೆ.
ಫೆಡ್ ಬ್ಯಾಂಕ್ ನ ಈ ಕ್ರಮವನ್ನು ಹಣದುಬ್ಬರ ನಿಯಂತ್ರಣಕ್ಕಾಗಿ ಈ ಹಿಂದೆ ಅನುಷ್ಠಾನಗೊಳಿಸಿದ್ದ ನಿರ್ಬಂಧನಾತ್ಮಕ ನೀತಿಯನ್ನು ಬದಲಿಸುವ ಪ್ರಕ್ರಿಯೆಯ ಆರಂಭದ ಸಂಕೇತ ಎಂದು ವಿಶ್ಲೇಷಿಸಲಾಗುತ್ತಿದೆ.
ಫೆಡರಲ್ ನಿಧಿ ಬಡ್ಡಿದರ ಇಳಿಕೆಯಿಂದಾಗಿ ಗ್ರಾಹಕರು ಮತ್ತು ವ್ಯವಹಾರಗಳಿಗೆ ವಾಣಿಜ್ಯ ಬ್ಯಾಂಕ್ ಗಳು ನೀಡುವ ಸಾಲ ಅಗ್ಗವಾಗಲಿದೆ. ಅಡಮಾನ ಸಾಲ, ವಾಹನ ಸಾಲ ಮತ್ತು ಕ್ರೆಡಿಟ್ ಕಾರ್ಡ್ ಸಾಲಗಳ ವೆಚ್ಚ ಸೇರಿದಂತೆ ಎಲ್ಲ ಹಣಕಾಸು ಉತ್ಪನ್ನಗಳ ವೆಚ್ಚ ಕಡಿತಗೊಳ್ಳಲಿದೆ. ಸಾಲ ಮತ್ತಷ್ಟು ಕೈಗೆಟುಕುವಂತಾಗಲಿದ್ದು, ವೆಚ್ಚ ಹಾಗೂ ಹೂಡಿಕೆಗೆ ಉತ್ತೇಜನ ನೀಡಲಿದೆ ಎಂದು ಹೇಳಲಾಗಿದೆ.
ಫೆಡ್ ಬ್ಯಾಂಕ್ ಕ್ರಮದ ಪರಿಣಾಮ ಜಾಗತಿಕವಾಗಿ ಪರಿಣಾಮ ಬೀರಲಿದ್ದು, ಅದರಲ್ಲೂ ಮುಖ್ಯವಾಗಿ ಭಾರತದಂಥ ವಿಕಾಸಶೀಲ ಮಾರುಕಟ್ಟೆಯ ಮೇಲೆ ಇದರ ಪರಿಣಾಮ ಅಧಿಕವಾಗಲಿದೆ. ಇದರ ತಕ್ಷಣದ ಪರಿಣಾಮವೆಂದರೆ, ಭಾರತದಲ್ಲಿ ವಿದೇಶಿ ಹೂಡಿಕೆ ಏರಿಕೆಯಾಗುವ ಸಾಧ್ಯತೆ ಇದೆ. ಅಮೆರಿಕದಲ್ಲಿ ಬಡ್ಡಿದರ ಅಧಿಕ ಇದ್ದಾಗ ಹೂಡಿಕೆದಾರರು ಅಮೆರಿಕದ ಖಜಾನೆಯ ಸೆಕ್ಯುರಿಟಿಗಳ ಮೇಲೆ ಹೂಡಿಕೆ ಮಾಡುವ ಮೂಲಕ ಅಧಿಕ ಪ್ರತಿಫಲ ಪಡೆಯುತ್ತಾರೆ. ಆದರೆ ಬಡ್ಡಿದರ ಕಡಿತದ ಕಾರಣದಿಂದ ಭದ್ರತಾ ಪತ್ರಗಳಿಂದ ಬರುವ ಲಾಭಾಂಶ ಇಳಿಕೆಯಾಗಲಿದೆ. ಇದರಿಂದಾಗಿ ಹೆಚ್ಚು ಪ್ರತಿಫಲ ದೊರಕುವ ಭಾರತೀಯ ಈಕ್ವಿಟಿಗಳು ಮತ್ತು ಸಾಲ ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆಗೆ ಒಲವು ತೋರುವ ನಿರೀಕ್ಷೆ ಇದೆ.