ಸೈಬರ್ ದಾಳಿಗೆ ತುತ್ತಾದ ಜಪಾನ್ ಏರ್ ಲೈನ್ಸ್ | ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಹಾರಾಟ ವ್ಯತ್ಯಯ
ಟೋಕಿಯೊ : ಗುರುವಾರ ನಡೆದಿರುವ ಸೈಬರ್ ದಾಳಿಯಲ್ಲಿ ವಿಮಾನ ಯಾನ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ, ಜಪಾನ್ ಏರ್ ಲೈನ್ಸ್ ವಿಮಾನಗಳ ಕಾರ್ಯಾಚರಣೆ ವ್ಯತ್ಯಯಗೊಂಡಿದೆ.
ಗುರುವಾರ ನಿರ್ಗಮಿಸಬೇಕಿದ್ದ ವಿಮಾನಗಳ ಟಿಕೆಟ್ ಮಾರಾಟವವನ್ನು ಅದು ಅಮಾನತುಗೊಳಿಸಿದೆ. ವಿಮಾನ ಹಾರಾಟ ವ್ಯತ್ಯಯದ ಹೊರತಾಗಿಯೂ, ವಿಮಾನಗಳ ಸುರಕ್ಷತೆಗೆ ಯಾವುದೇ ತೊಂದರೆಯಾಗಿಲ್ಲ ಎಂದು ಜಪಾನ್ ಏರ್ ಲೈನ್ಸ್ ಸ್ಪಷ್ಟನೆ ನೀಡಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಜಪಾನ್ ಏರ್ ಲೈನ್ಸ್, ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದ ವಿಳಂಬಕ್ಕೆ ಕಾರಣವಾದ ತಾಂತ್ರಿಕ ತೊಂದರೆಯು ವಿಮಾನ ಯಾನ ಸಂಸ್ಥೆಯನ್ನು ತನ್ನ ಗ್ರಾಹಕರೊಂದಿಗೆ ಸಂಪರ್ಕಿಸಿದ್ದ ಅಂತರ್ಜಾಲ ಸಾಧನಕ್ಕೆ ಸಂಬಂಧಿಸಿತ್ತು. ವಿಮಾನ ಯಾನ ಸಂಸ್ಥೆಯು ರೂಟರ್ ನ ತಾಂತ್ರಿಕ ತೊಂದರೆಯನ್ನು ಪತ್ತೆ ಹಚ್ಚಿದ್ದು, ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸದ್ಯ ವಿಮಾನ ಯಾನ ವ್ಯವಸ್ಥೆಯಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿ, ವಿಮಾನ ಹಾರಾಟ ಸೇವೆಯನ್ನು ಮರುಸ್ಥಾಪಿಸುವ ಪ್ರಯತ್ನಗಳು ಭರದಿಂದ ಮುಂದುವರಿದಿವೆ ಎಂದು ಹೇಳಿದೆ.
ವಿಮಾನ ಹಾರಾಟ ವ್ಯತ್ಯಯದಿಂದ ಆಗಿರುವ ವಿಳಂಬಕ್ಕೆ ತನ್ನ ಗ್ರಾಹಕರ ಕ್ಷಮೆ ಕೋರಿರುವ ಜಪಾನ್ ಏರ್ ಲೈನ್ಸ್, ಪರಿಸ್ಥಿತಿ ತಹಬಂದಿಗೆ ಬರುತ್ತಿದ್ದಂತೆಯೆ, ಪರಿಷ್ಕೃತ ವಿಮಾನ ಹಾರಾಟ ವೇಳಾಪಟ್ಟಿಯ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದೆ.