ಗಾಝಾ: ಇಸ್ರೇಲ್ ದಾಳಿಯಲ್ಲಿ 5 ಪತ್ರಕರ್ತರ ಸಹಿತ 10 ಮಂದಿ ಮೃತ್ಯು
ಗಾಝಾ ; ಗಾಝಾದ ಮೇಲೆ ಗುರುವಾರ ಬೆಳಿಗ್ಗೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಐವರು ಪತ್ರಕರ್ತರ ಸಹಿತ ಕನಿಷ್ಟ 10 ಮಂದಿ ಸಾವನ್ನಪ್ಪಿರುವುದಾಗಿ ಗಾಝಾದ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ಗಾಝಾ ನಗರದ ಬಳಿಯ ಝೈಟೌನ್ ಪ್ರದೇಶದಲ್ಲಿನ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಐವರು ಮೃತಪಟ್ಟಿದ್ದು ಇತರ 20 ಮಂದಿ ಗಾಯಗೊಂಡಿದ್ದಾರೆ. ಕುಸಿದು ಬಿದ್ದಿರುವ ಮನೆಯ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆಯಿದ್ದು ಸಾವು-ನೋವಿನ ಪ್ರಮಾಣ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಧ್ಯ ಗಾಝಾದ ನುಸೀರತ್‍ನಲ್ಲಿರುವ ಅಲ್-ಅವ್ದಾ ಆಸ್ಪತ್ರೆಯ ಸಮೀಪ ಕಾರೊಂದನ್ನು ಗುರಿಯಾಗಿಸಿ ನಡೆದ ದಾಳಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಪತ್ರಕರ್ತರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಕಾರಿನ ಮೇಲೆ `ಮಾಧ್ಯಮ' ಎಂದು ಬರೆಯಲಾಗಿತ್ತು ಮತ್ತು ಆಸ್ಪತ್ರೆ ಹಾಗೂ ನುಸೀರಾತ್ ಶಿಬಿರ ಪ್ರದೇಶದಲ್ಲಿ ವರದಿ ಮಾಡಲು ತೆರಳುತ್ತಿದ್ದಾಗ ದಾಳಿ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.