ಟಿಬೆಟ್‍ನಲ್ಲಿ ವಿಶ್ವದ ಅತೀ ದೊಡ್ಡ ಅಣೆಕಟ್ಟು ನಿರ್ಮಿಸಲಿರುವ ಚೀನಾ; ಭಾರತ ಮತ್ತು ಬಾಂಗ್ಲಾಕ್ಕೆ ಅಪಾಯ
ಬೀಜಿಂಗ್: ಟಿಬೆಟಿಯನ್ ಪ್ರಸ್ಥಭೂಮಿಯ ಅಂಚಿನಲ್ಲಿ ಮಹಾತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸುವ ಮೂಲಕ ವಿಶ್ವದ ಅತೀ ದೊಡ್ಡ ಅಣೆಕಟ್ಟಿನ ನಿರ್ಮಾಣವನ್ನು ಚೀನಾ ಅನುಮೋದಿಸಿದೆ. ಇದು ಭಾರತ ಮತ್ತು ಬಾಂಗ್ಲಾದೇಶದ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಬಹುದು ಎಂದು ವರದಿಯಾಗಿದೆ.
ಯಾರ್ಲುಂಗ್ ಝಾಂಗ್‍ಬೊ ನದಿಯ ಕೆಳಭಾಗದಲ್ಲಿರುವ ಅಣೆಕಟ್ಟು ವಾರ್ಷಿಕವಾಗಿ 300 ಶತಕೋಟಿ ಕಿಲೋವ್ಯಾಟ್ ಗಂಟೆಗಳ ವಿದ್ಯುತ್ ಉತ್ಪಾದಿಸಲಿದೆ ಎಂದು 2020ರಲ್ಲಿ ಚೀನಾದ ಪವರ್ ಕನ್‍ಸ್ಟ್ರಕ್ಷನ್ ಕಾರ್ಪೊರೇಶನ್ ಅಂದಾಜಿಸಿತ್ತು. ಇದು ಈಗ ವಿಶ್ವದ ಅತೀ ದೊಡ್ಡ ಅಣೆಕಟ್ಟು ಎನಿಸಿರುವ, ಮಧ್ಯಚೀನಾದ `ಥ್ರೀ ಗಾಗ್ರ್ಸ್' ಅಣೆಕಟ್ಟಿಗಿಂತ ಮೂರು ಪಟ್ಟಿಗೂ ಅಧಿಕ ವಿದ್ಯುತ್ ಉತ್ಪಾದನೆ ಮಾಡುವ ಸಾಮಥ್ರ್ಯ ಹೊಂದಿದೆ. ಇಂಗಾಲ ಬಳಕೆ ಕಡಿಮೆಗೊಳಿಸುವ ಗುರಿ(ಕಾರ್ಬನ್ ಡೈಯಾಕ್ಸೈಡ್ ಹೊರಸೂಸುವಿಕೆ ಪ್ರಮಾಣವನ್ನು ಮಿತಿಗೊಳಿಸುವ ಗುರಿ)ಯನ್ನು ತಲುಪುವಲ್ಲಿ ಈ ಯೋಜನೆ ಪ್ರಮುಖ ಪಾತ್ರ ವಹಿಸಲಿದೆ. ಇಂಜಿನಿಯರಿಂಗ್‍ನಂತಹ ಉದ್ಯಮಗಳನ್ನು ಉತ್ತೇಜಿಸುತ್ತದೆ ಮತ್ತು ಟಿಬೆಟ್‍ನಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್‍ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ಯಾರ್ಲುಂಗ್ ಜಾಂಗ್ಬೋ ನದಿಯು ಒಂದು ವಿಭಾಗದ ಸುಮಾರು 50 ಕಿ.ಮೀ ವ್ಯಾಪ್ತಿಯಲ್ಲಿ 6,561 ಅಡಿಯಷ್ಟು ಕೆಳಕ್ಕೆ ಧುಮುಕುತ್ತದೆ. ಇದು ಬೃಹತ್ ಜಲವಿದ್ಯುತ್ ಸಾಮಥ್ರ್ಯ ಮತ್ತು ಅನನ್ಯ ಇಂಜಿನಿಯರಿಂಗ್ ಸವಾಲುಗಳನ್ನು ನೀಡುತ್ತದೆ. ಅಣೆಕಟ್ಟು ನಿರ್ಮಾಣ ವೆಚ್ಚ ಸುಮಾರು 34.83 ಶತಕೋಟಿ ಡಾಲರ್‍ಗೂ ಹೆಚ್ಚಲಿದೆ. ಇದರಲ್ಲಿ ಅಣೆಕಟ್ಟು ನಿರ್ಮಾಣದಿಂದ ನೆಲೆ ಕಳೆದುಕೊಳ್ಳಲಿರುವ 1.4 ಕೋಟಿ ಜನರಿಗೆ ಮರುವಸತಿ ಕಲ್ಪಿಸುವ ವೆಚ್ಚವೂ ಸೇರಿದೆ. ಪ್ರಾರಂಭದಲ್ಲಿ ಅಂದಾಜು ಮಾಡಿದ್ದಕ್ಕಿಂತ 4 ಪಟ್ಟು ಹೆಚ್ಚು ವೆಚ್ಚವಾಗಲಿದೆ ಎಂದು ವರದಿ ಹೇಳಿದೆ. ಪ್ರಸ್ಥಭೂಮಿಯಲ್ಲಿ ಅತ್ಯಂತ ಶ್ರೀಮಂತ ಮತ್ತು ವೈವಿಧ್ಯಮಯ ಪರಿಸರ ವ್ಯವಸ್ಥೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿಲ್ಲ.
ವ್ಯಾಪಕವಾದ ಭೂ ವೈಜ್ಞಾನಿಕ ಪರಿಶೋಧನೆಗಳು ಮತ್ತು ತಾಂತ್ರಿಕ ಪ್ರಗತಿಗಳ ಮೂಲಕ ವಿಜ್ಞಾನ ಆಧಾರಿತ, ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಅಭಿವೃದ್ಧಿ ಯೋಜನೆಯ ದೃಢವಾದ ಅಡಿಪಾಯವನ್ನು ಹಾಕಲಾಗಿದೆ. ಅಣೆಕಟ್ಟು ಹತ್ತಿರದ ಸೌರ ಮತ್ತು ಪವನ ಶಕ್ತಿ ಸಂಪನ್ಮೂಲಗಳ ಅಭಿವೃದ್ಧಿಗೆ ಚಾಲನೆ ನೀಡುತ್ತದೆ. ಈ ಯೋಜನೆಯು ಹಸಿರು ಮತ್ತು ಕಡಿಮೆ ಕಾರ್ಬನ್ ಡೈಯಾಕ್ಸೈಡ್ ಇಂಧನ ವ್ಯವಸ್ಥೆಗೆ ಚೀನಾದ ಪರಿವರ್ತನೆಯಲ್ಲಿ ಪ್ರಮುಖ ಹೆಜ್ಜೆಯಾಗಲಿದೆ ಎಂದು ಕ್ಸಿನ್‍ಹುವಾ ವರದಿ ಹೇಳಿದೆ.
ಭಾರತದಲ್ಲಿ ಬ್ರಹ್ಮಪುತ್ರಾ ನದಿ:
ಟಿಬೆಟ್ ಪ್ರಸ್ಥಭೂಮಿಯಾದ್ಯಂತ ಹರಿಯುವ ಯಾರ್ಲುಂಗ್ ಜಾಂಗ್ಬೊ ನದಿ ಆಳವಾದ ಕಣಿವೆಯನ್ನು ರೂಪಿಸುತ್ತಾ ಭಾರತವನ್ನು ತಲುಪುತ್ತದೆ. ಇಲ್ಲಿ ಬ್ರಹ್ಮಪುತ್ರ ನದಿ ಎಂಬ ಹೆಸರು ಪಡೆದಿದ್ದು ಅರುಣಾಚಲ ಪ್ರದೇಶ, ಅಸ್ಸಾಂ ರಾಜ್ಯದ ಮೂಲಕ ಸಾಗಿ ಬಾಂಗ್ಲಾದೇಶವನ್ನು ತಲುಪುತ್ತದೆ.
ಅಣೆಕಟ್ಟಿನ ಬಗ್ಗೆ ಭಾರತ ಮತ್ತು ಬಾಂಗ್ಲಾದೇಶಗಳು ಈಗಾಗಲೇ ಆತಂಕ ವ್ಯಕ್ತಪಡಿಸಿವೆ. ಈ ಯೋಜನೆಯು ಸ್ಥಳೀಯ ಪರಿಸರ ವಿಜ್ಞಾನವನ್ನು ಮಾತ್ರವಲ್ಲ, ನದಿಯ ಕೆಳಭಾಗದ ಹರಿವು ಮತ್ತು ಹಾದಿಯನ್ನು ಸಹಾ ಬದಲಾಯಿಸುತ್ತದೆ. ಚೀನಾವು ಯಾರ್ಲುಂಗ್ ಜಾಂಗ್ಬೋ ನದಿಯ ಮೇಲ್ಭಾಗದಲ್ಲಿ ಈಗಾಗಲೇ ಜಲವಿದ್ಯುತ್ ಉತ್ಪಾದನೆಯನ್ನು ಪ್ರಾರಂಭಿಸಿದ್ದು ಇನ್ನೂ ಕೆಲವು ಜಲವಿದ್ಯುತ್ ಯೋಜನೆಗಳನ್ನು ರೂಪಿಸಿದೆ.