ಲೆಬನಾನ್ ಸ್ಫೋಟ: 14 ಮಂದಿ ಮೃತ್ಯು, 300ಕ್ಕೂ ಹೆಚ್ಚು ಮಂದಿಗೆ ಗಾಯ

Update: 2024-09-19 02:22 GMT

ಸ್ಫೋಟಗೊಂಡ ವಾಕಿಟಾಕಿ PC: x.com/Sam_Mania_

ಲೆಬನಾನ್: ಹಿಜ್ಬುಲ್ಲಾ ಸಂಘಟನೆಯನ್ನು ಗುರಿ ಮಾಡಿ ಮಂಗಳವಾರ ನಡೆದ ಪೇಜರ್ ಸ್ಫೋಟ ಘಟನೆಯ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಲೆಬನಾನ್ ನಲ್ಲಿ ಸಂಭವಿಸಿದ ವಾಕಿಟಾಕಿ ಮತ್ತು ಫೋನ್ ಸ್ಫೋಟ ಘಟನೆಗಳಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಈ ಮಧ್ಯಪ್ರಾಚ್ಯ ದೇಶದಲ್ಲಿ ಮಂಗಳವಾರ ನಡೆದ ಪೇಜರ್ ಸ್ಫೋಟ ಘಟನೆಯಲ್ಲಿ ಕನಿಷ್ಠ 12 ಮಂದಿ ಮೃತಪಟ್ಟು, 3 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಬುಧವಾರದ ಘಟನೆಯಲ್ಲಿ ಎಷ್ಟು ವಾಕಿಟಾಕಿಗಳು ಸ್ಫೋಟಗೊಂಡಿವೆ ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಹಲವು ಸಾಧನಗಳು ಸ್ಫೋಟಗೊಂಡಿವೆ ಎಂದು ಅಂದಾಜಿಸಲಾಗಿದೆ. ಪೂರ್ವ ಲೆಬನಾನ್ ನ ಹಲವು ಕಡೆಗಳಲ್ಲಿ ಲ್ಯಾಂಡ್ ಲೈನ್ ದೂರವಾಣಿಗಳು ಕೂಡಾ ಸ್ಫೋಟಗೊಂಡಿವೆ ಎಂದು ವರದಿಯಾಗಿದೆ.

ಕೈಯಲ್ಲಿ ಹಿಡಿಯುವ ವೈರ್ಲೆಸ್ ಅಥವಾ ವಾಕಿ ಟಾಕಿಗಳನ್ನು ಐದು ತಿಂಗಳು ಮುನ್ನ ಖರೀದಿಸಲಾಗಿದ್ದು, ಪೇಜರ್ ಗಳನ್ನು ಖರೀದಿಸಿದ ಸಂದರ್ಭದಲ್ಲೇ ಇದು ಕೂಡಾ ಕೈಸೇರಿದೆ ಎಂದು ವರದಿಗಳು ಹೇಳಿವೆ.

ಇಂದು ದಕ್ಷಿಣ ಲೆಬನಾನ್ ಮತ್ತು  ಬೈರೂತ್ ನಗರದ ಉಪನಗರಗಳಲ್ಲಿ ಸ್ಫೋಟ ಸಂಭವಿಸಿದೆ. ನಿನ್ನೆಯ ಪೇಜರ್ ದುರಂತದಲ್ಲಿ ಮೃತಪಟ್ಟ ಹಿಜ್ಬುಲ್ಲಾ ಕಾರ್ಯಕರ್ತನ ಅಂತ್ಯಸಂಸ್ಕಾರ ಸಂದರ್ಭದಲ್ಲೇ ಒಂದು ಸ್ಫೋಟ ಸಂಭವಿಸಿತು. ಈ ಘಟನೆಯ ವಿಡಿಯೊ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿವೆ.

ಈ ಮಧ್ಯೆ ಇರಾನ್ ಬೆಂಬಲಿತ ಹಿಜ್ಬುಲ್ಲಾ ಹೇಳಿಕೆ ನೀಡಿ, ಪೇಜರ್ ಸ್ಫೋಟಕ್ಕೆ ಪ್ರತೀಕಾರವಾಗಿ ಇಸ್ರೇಲಿನ ಶಸ್ತ್ರಾಗಾರದ ಮೇಲೆ ತಾನು ರಾಕೆಟ್ ದಾಳಿ ಮಾಡಿರುವುದಾಗಿ ಬಹಿರಂಗಪಡಿಸಿದೆ. ಇದು ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಉಲ್ಬಣಿಸಲು ಕಾರಣವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News