ಪೋಪ್ ಫ್ರಾನ್ಸಿಸ್ ಗೆ `ಮೆಡಲ್ ಆಫ್ ಫ್ರೀಡಂ' ಗೌರವ ನೀಡಿದ ಅಮೆರಿಕ ಅಧ್ಯಕ್ಷ ಬೈಡನ್
ವಾಷಿಂಗ್ಟನ್: ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಶನಿವಾರ ಫೋನ್ ಕರೆಯಲ್ಲಿ ಪೋಪ್ ಫ್ರಾನ್ಸಿಸ್ ಅವರಿಗೆ ಅಧ್ಯಕ್ಷೀಯ `ಸ್ವಾತಂತ್ರ್ಯ ಪದಕ' ಪ್ರದಾನ ಮಾಡಿದರು ಎಂದು ಶ್ವೇತಭವನದ ಅಧಿಕಾರಿಗಳನ್ನು ಉಲ್ಲೇಖಿಸಿ ಎಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಜೋ ಬೈಡನ್ ಅಧ್ಯಕ್ಷರಾಗಿ ತನ್ನ ಕೊನೆಯ ಸಾಗರೋತ್ತರ ಪ್ರವಾಸವಾಗಿ ರೋಮ್‍ಗೆ ಭೇಟಿ ನೀಡಿ ಪೋಪ್ ಫ್ರಾನ್ಸಿಸ್‍ಗೆ ವೈಯಕ್ತಿಕವಾಗಿ ಪದಕ ಪ್ರದಾನ ಮಾಡುವ ಕಾರ್ಯಕ್ರಮವಿತ್ತು. ಆದರೆ ಲಾಸ್ ಏಂಜಲೀಸ್‍ನಲ್ಲಿ ಹರಡುತ್ತಿರುವ ಭೀಕರ ಕಾಡ್ಗಿಚ್ಚಿನ ನಿಯಂತ್ರಣ ಕಾರ್ಯದ ಮೇಲೆ ನಿಗಾ ವಹಿಸಬೇಕಿರುವುದರಿಂದ ರೋಮ್ ಪ್ರವಾಸ ರದ್ದಾಗಿದೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.
`ಪೋಪ್ ಫ್ರಾನ್ಸಿಸ್, ನಿಮ್ಮ ನಮ್ರತೆ ಮತ್ತು ನಿಮ್ಮ ಕಾರ್ಯವಿಧಾನವು ಪದಗಳನ್ನು ಮೀರಿದೆ. ಎಲ್ಲರ ಬಗ್ಗೆಯೂ ಪ್ರೀತಿ ತೋರುವ ನಿಮ್ಮ ಕಾಳಜಿಗೆ ಸಾಟಿಯಿಲ್ಲ. ಜನರ ಪೋಪ್ ಆಗಿ ನೀವು ನಂಬಿಕೆ, ಭರವಸೆ ಮತ್ತು ಪ್ರೀತಿಯ ಬೆಳಕಾಗಿದ್ದೀರಿ' ಎಂದು ಬೈಡನ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.