ನರೇಂದ್ರ ಮೋದಿ ಕುರಿತು ಬದಲಾಗುತ್ತಿರುವ ಅಮೆರಿಕದ ನಿಲುವು

Update: 2024-04-07 16:47 GMT

Photo : deccanherald.com

ಹೊಸದಿಲ್ಲಿ : ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಅಮೆರಿಕದ ನಿಲುವು ಬದಲಾಗುತ್ತಿರುವುದು ಸ್ಪಷ್ಟಗೊಳ್ಳುತ್ತಿದೆ. ಇತ್ತೀಚಿಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನವನ್ನು ಟೀಕಿಸಿರುವ ಅಮೆರಿಕ, ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವುದನ್ನೂ ಟೀಕಿಸಿದೆ.

ರಾಜಸ್ಥಾನದಲ್ಲಿ ಇತ್ತೀಚಿಗೆ ಚುನಾವಣಾ ರ‍್ಯಾಲಿಯೊಂದರಲ್ಲಿ ಮಾತನಾಡುತ್ತಿದ್ದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ಪ್ರತಿಪಕ್ಷಗಳ ಅರ್ಧದಷ್ಟು ನಾಯಕರು ಜೈಲುಗಳಲ್ಲಿದ್ದಾರೆ ಮತ್ತು ಉಳಿದ ನಾಯಕರು ಜಾಮೀನಿನಲ್ಲಿ ಹೊರಗಿದ್ದಾರೆ ಎಂದು ಘೋಷಿಸಿದ್ದರು. ಪ್ರತಿಪಕ್ಷಗಳನ್ನು ಶಕ್ತಿಹೀನಗೊಳಿಸುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಹೇಗೆ ತಿರುಚಲಾಗುತ್ತಿದೆ ಎನ್ನುವುದನ್ನು ನಡ್ಡಾರ ಹೇಳಿಕೆ ಸ್ಪಷ್ಟವಾಗಿ ಸೂಚಿಸಿದೆ.

ಭಾರತದಲ್ಲಿಯ ಬೆಳವಣಿಗೆಗಳನ್ನು ಜಗತ್ತು ಗಮನಿಸುತ್ತಿದೆ. ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಕೇಜ್ರಿವಾಲ್ ಬಂಧನವನ್ನು ಮೊದಲು ಜರ್ಮನಿ, ಬಳಿಕ ಅಮೆರಿಕ ಮತ್ತು ವಿಶ್ವಸಂಸ್ಥೆ ಕೂಡ ಟೀಕಿಸಿವೆ. ಈ ಟೀಕೆಗಳಿಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದರು. ಅಮೆರಿಕದ ಹೇಳಿಕೆಗಳನ್ನು ‘ಹಳೆಯ ಅಭ್ಯಾಸಗಳು’ ಎಂದು ಬಣ್ಣಿಸಿದ್ದ ಅವರು, ಅದು ರಾಜಕೀಯ ಔಚಿತ್ಯವನ್ನು ಪಾಲಿಸುತ್ತಿಲ್ಲ ಎಂದು ಹೇಳಿದ್ದರು. ‘ನಾವು ಪರಸ್ಪರರ ರಾಜಕೀಯವನ್ನು ಟೀಕಿಸಬಾರದು ’ ಎಂದೂ ಹೇಳಿದ್ದರು.

ಜೈಶಂಕರ್ ಅವರ ಪ್ರತಿಕ್ರಿಯೆಯು ದ್ವಂದ್ವ ನಿಲುವನ್ನು ಪ್ರದರ್ಶಿಸಿತ್ತು. ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮುನ್ನ 2020 ಸೆಪ್ಟೆಂಬರ್‌ನಲ್ಲಿ ಹ್ಯೂಸ್ಟ್‌ನ್‌ನಲ್ಲಿ ನಡೆದಿದ್ದ ರ‍್ಯಾಲಿಯೊಂದರಲ್ಲಿ ‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್ ’ಎಂಬ ಕರೆಯನ್ನು ನೀಡಿದ್ದರು. ಆಗ ಅವರೂ ಇದೇ ಔಚಿತ್ಯದ ಲಕ್ಷಣ ರೇಖೆಯನ್ನು ದಾಟಿದ್ದರು.

ಮೋದಿ ಆಡಳಿತದ ವಿರುದ್ಧ ಅಮೆರಿಕದ ಟೀಕೆಗೆ ಉಕ್ರೇನ್ ಮೇಲೆ ರಶ್ಯದ ಆಕ್ರಮಣವನ್ನು ನಿಸ್ಸಂದಿಗ್ಧವಾಗಿ ಖಂಡಿಸಲು ಭಾರತದ ನಿರಾಕರಣೆ, ಮರು ರಫ್ತಿಗಾಗಿ ರಶ್ಯದಿಂದ ತೈಲ ಆಮದು ಮುಂದುವರಿಕೆ, ಗಾಝಾ ವಿರುದ್ಧ ಇಸ್ರೇಲ್ ಯುದ್ಧದ ಕುರಿತು ವಿರೋಧಾಭಾಸದ ಹೇಳಿಕೆಗಳಂತಹ ಹಲವಾರು ಭೌಗೋಳಿಕ ರಾಜಕೀಯ ಅಂಶಗಳು ಕಾರಣವಾಗಿರಬಹುದು.

ತನ್ನ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಅಧಿಕಾರಿಗಳ ಕೈವಾಡವಿತ್ತು ಎಂಬ ಕೆನಡಾ ಸರಕಾರದ ಆರೋಪ ಮತ್ತು ಅಮೆರಿಕನ್ ಪ್ರಜೆ ಗುರ್ಪತ್ವಂತ್ ಸಿಂಗ್ ಪನ್ನುನ್ ಕೊಲೆ ಯತ್ನದ ಸಂಚನ್ನು ಭಾರತೀಯ ಸರಕಾರದ ಏಜೆಂಟ್‌ರು ರೂಪಿಸಿದ್ದರು ಎಂಬ ಆರೋಪ ಅಮೆರಿಕ ಸರಕಾರವನ್ನು ಕೆರಳಿಸಿರುವ ಇತರ ಎರಡು ಘಟನೆಗಳಾಗಿರುವಂತಿದೆ.

ಭಾರತವನ್ನು ಬಹಿರಂಗವಾಗಿ ನಿಂದಿಸುವ ನಿರ್ಧಾರವನ್ನು ಅಮೆರಿಕವು ಅಳೆದು ತೂಗಿ ತೆಗೆದುಕೊಂಡಿತ್ತು. ಅದರ ಕೋಪವನ್ನು ಎದುರಿಸುವುದು ಭಾರತಕ್ಕೆ ಅನಿವಾರ್ಯವಾಗಿತ್ತು. ಪನ್ನುನ್ ಕೊಲೆ ಯತ್ನದಲ್ಲಿ ’ಫಂಡ್ ಏಜೆಂಟ್ ’ ನೋರ್ವ ಭಾಗಿಯಾಗಿದ್ದ ಮತ್ತು ಆತನನ್ನು ಗುಪ್ತಚರ ಸಂಸ್ಥೆಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಭಾರತವು ಹೇಳಿಕೊಂಡಿತ್ತು. ಭಾರತದ ವಿವರಣೆಯು ಪನ್ನುನ್ ಕೊಲೆ ಯತ್ನದಲ್ಲಿ ಭಾಗಿಯಾಗಿದ್ದವರ ವಿರುದ್ಧ ಅಮೆರಿಕದ ನ್ಯಾಯ ಇಲಾಖೆಯ ಕಾನೂನು ಕ್ರಮಗಳನ್ನು ತಡೆಯುವ ಸಾಧ್ಯತೆಯಿಲ್ಲ. ಇನ್ನಷ್ಟು ಸಮಯ ಈ ವಿಷಯ ಜೀವಂತವಾಗಿಯೇ ಇರಲಿದೆ.

ಇದು ಸಾಲದೆಂಬಂತೆ ಪಾಕಿಸ್ತಾನದಲ್ಲಿ 20 ಅಪೇಕ್ಷಿತ ಭಯೋತ್ಪಾದಕರ ಹತ್ಯೆಗಳ ಹಿಂದೆ ಭಾರತ ಸರಕಾರದ ಕೈವಾಡವಿತ್ತು ಎಂಬ ಆರೋಪಗಳೂ ಮುನ್ನೆಲೆಗೆ ಬಂದಿವೆ.

ಅಂತರರಾಷ್ಟ್ರೀಯ ಅಸಮಾಧಾನವು ಮೋದಿಯವರನ್ನು ರಾಷ್ಟ್ರೀಯ ಭದ್ರತೆಯ ‘ಸ್ಟ್ರಾಂಗ್‌ಮ್ಯಾನ್’ ಎಂದು ಬಿಂಬಿಸಲು ಈ ಘಟನೆಗಳನ್ನು ಮೋದಿ ಸರಕಾರ ಮತ್ತು ಬಿಜೆಪಿ ಬಳಸಿಕೊಳ್ಳುವುದನ್ನು ಈಗಾಗಲೇ ತಡೆದಿದೆ. ಚೀನಾ ಒಂದೇ ಒಂದು ಗುಂಡನ್ನೂ ಹಾರಿಸದೆ ಪೂರ್ವ ಲಡಾಖ್‌ನಲ್ಲಿ ಭಾರತವು ಹಕ್ಕು ಸಾಧಿಸಿದ್ದ 1,000 ಚ.ಕಿ.ಮೀ. ಪ್ರದೇಶವನ್ನು ವಶಪಡಿಸಿಕೊಂಡಿರುವುದು ಈ ಚಿತ್ರಣವನ್ನು ಗಣನೀಯವಾಗಿ ಕುಗ್ಗಿಸಿದೆ. ಅಂತರರಾಷ್ಟ್ರೀಯ ಅಸಮಾಧಾನವು ಮೋದಿಯವರ ಪಕ್ಷವು ಖಲಿಸ್ತಾನಿ ಪ್ರತ್ಯೇಕತಾವಾದವನ್ನು ಚುನಾವಣಾ ವಿಷಯವನ್ನಾಗಿ ಬಳಸಲೂ ತಡೆಯೊಡ್ಡಿದೆ.

ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಲು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರ ನಿರಾಕರಣೆಯು ಮೋದಿಯವರ ದೇಶಿಯ ಪ್ರತಿಷ್ಠೆಯನ್ನು ಹೆಚ್ಚಿಸುವ ಯಾವುದನ್ನೂ ಮಾಡದಿರಲು ಆ ದೇಶವು ಬಯಸಿದೆ ಎನ್ನುವುದನ್ನು ಸಂಕೇತಿಸಿದೆ.

ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗಳು ಮತ್ತು ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವುದನ್ನೂ ಅಮೆರಿಕವು ಟೀಕಿಸಿದೆ.

2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಮೆರಿಕನ್ ಮುಸ್ಲಿಮ್ ಮತದಾರರ ಅಗಾಧ ಬೆಂಬಲವನ್ನು ಕಳೆದುಕೊಳ್ಳುವ ಅಪಾಯವನ್ನೂ ಡೆಮಾಕ್ರಾಟ್‌ಗಳು ಈಗಾಗಲೇ ಎದುರಿಸುತ್ತಿದ್ದಾರೆ. 2016ರ ಚುನಾವಣೋತ್ತರ ಸಮೀಕ್ಷೆಗಳು ಅಮೆರಿಕನ್ ಮುಸ್ಲಿಮರ ಮತಗಳಲ್ಲಿ ಶೇ.69ರಷ್ಟು ಬೈಡೆನ್ ಮತ್ತು ಶೇ.17ರಷ್ಟು ಮತಗಳು ಟ್ರಂಪ್ ಪಾಲಾಗಿದ್ದವು ಎನ್ನುವುದನ್ನು ತೋರಿಸಿದ್ದವು. ಇಂದು ಬೈಡೆನ್ ವಿರುದ್ಧ ಅಮೆರಿಕನ್ ಮುಸ್ಲಿಮರು ಮತ್ತು ಅರಬ್ಬರು ಎಷ್ಟೊಂದು ಕ್ರೋಧಗೊಂಡಿದ್ದಾರೆ ಎಂದರೆ ಅವರಿಗಾಗಿ ಆಯೋಜಿಸಿದ್ದ ಇಫ್ತಾರ್ ಕೂಟವನ್ನು ಶ್ವೇತಭವನವು ರದ್ದುಗೊಳಿಸುವಂತಾಗಿತ್ತು. ಗಾಝಾದಲ್ಲಿ ಇಸ್ರೇಲ್‌ನಿಂದ ಫೆಲೆಸ್ತೀನಿಗಳ ನರಮೇಧವನ್ನು ಬೆಂಬಲಿಸುತ್ತಿರುವ ಶ್ವೇತಭವನದ ಕೂಟದಲ್ಲಿ ಭಾಗಿಯಗಲು ಹೆಚ್ಚಿನವರು ನಿರಾಕರಿಸಿದ್ದರು.

ಬಿಜೆಪಿ ಸರಕಾರವು ಅಲ್ಪಸಂಖ್ಯಾತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ವ್ಯಾಪಕವಾಗಿ ಗ್ರಹಿಸಲ್ಪಟ್ಟಿರುವಾಗ ಮೋದಿಯವರ ಮೂರನೇ ಅಧಿಕಾರಾವಧಿಯನ್ನು ಬೆಂಬಲಿಸುವುದು ಬೈಡೆನ್ ಅವರ ಪುನರಾಯ್ಕೆಯನ್ನು ಇನ್ನಷ್ಟು ಕಠಿಣಗೊಳಿಸುತ್ತದೆ ಅಷ್ಟೇ.

ಈವರೆಗೆ ಭಾರತದಲ್ಲಿ ಚುನಾವಣಾ ಪ್ರಚಾರವು ಬಿಜೆಪಿಯ ಗೆಲುವಿನ ಸೂತ್ರಗಳಾಗಿರುವ ತೀವ್ರ ಧಾರ್ಮಿಕ ಧ್ರುವೀಕರಣ ಮತ್ತು ಪಾಕಿಸ್ತಾನದ ವಿರುದ್ಧ ವಾಗ್ದಾಳಿಯನ್ನು ನೋಡಿಲ್ಲ. ಮುಸ್ಲಿಮ್ ಸಮುದಾಯದ ಮೇಲಿನ ದಾಳಿಯನ್ನು ಭಾರತದ ‘ಆಂತರಿಕ ವ್ಯವಹಾರ’ಎಂದು ಬಣ್ಣಿಸಲು ಇನ್ನು ಮುಂದೆ ಸಾಧ್ಯವಿಲ್ಲ ಎನ್ನುವುದು ಹಾಗೂ ಪಾಕಿಸ್ತಾನದಲ್ಲಿನ ಅಮೆರಿಕ ಸ್ನೇಹಿ ಆಡಳಿತದ ವಿರುದ್ಧ ದ್ವೇಷವನ್ನು ಹರಡುವುದು ಭಾರತ ಮತ್ತು ಅಮೆರಿಕ ಸಂಬಂಧಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಬಹುದು ಎಂಬ ಅಂಶಗಳು ಬಹುಶಃ ಇದಕ್ಕೆ ಕಾರಣವಾಗಿರಬಹುದು.

ಭಾರತದ ಮಾರುಕಟ್ಟೆ ಗಾತ್ರ ಮತ್ತು ಚೀನದ ವಿರುದ್ಧ ವ್ಯೂಹಾತ್ಮಕ ಪಾಲುದಾರ ಎನ್ನುವುದನ್ನು ಪರಿಗಣಿಸಿ ಅಮೆರಿಕ ಮತ್ತು ಪಾಶ್ಚಾತ್ಯ ದೇಶಗಳು 10 ವರ್ಷಗಳ ಕಾಲ ಮೋದಿಯವರನ್ನು ಓಲೈಸಿದ್ದವು. ಈ ಓಲೈಕೆಯಲ್ಲಿ ಮೋದಿಯವರ ಆಡಳಿತದಲ್ಲಿ ಪ್ರಜಾಪ್ರಭುತ್ವದ ಹಿನ್ನಡೆಯನ್ನು ಮತ್ತು ಅವರು ಸಂಕುಚಿತ ಹಿಂದು ಬಹುಸಂಖ್ಯಾತ ರಾಷ್ಟ್ರದ ಅನ್ವೇಷಣೆಯಲ್ಲಿ ಅಲ್ಪಸಂಖ್ಯಾತರನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡಿದ್ದನ್ನು ಅವು ಕಡೆಗಣಿಸಿದ್ದವು.

ಹೀಗಿದ್ದರೂ ಮೋದಿಯವರು ಮೂರನೇ ಅಧಿಕಾರಾವಧಿಯನ್ನು ಬಯಸಿರುವ ಮುನ್ನ ವಾತಾವರಣದಲ್ಲಿ ಗ್ರಹಿಸಬಹುದಾದ ಬದಲಾವಣೆ ಕಂಡು ಬರುತ್ತಿರುವುದು ಸುಳ್ಳಲ್ಲ.

ಸೌಜನ್ಯ : deccanherald.com

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News