ರಷ್ಯಾದಿಂದ ಉಕ್ರೇನ್ ನಲ್ಲಿ ರಾಸಾಯನಿಕ ಅಸ್ತ್ರ ಬಳಕೆ: ಅಮೆರಿಕ ಆರೋಪ

Update: 2024-05-03 03:20 GMT

Photo: X/Gerashchenko_en

ವಾಷಿಂಗ್ಟನ್: ಉಕ್ರೇನ್ ಯುದ್ಧದಲ್ಲಿ ರಷ್ಯಾ ವಿಷಾನಿಲ ಸೇರಿದಂತೆ ರಾಸಾಯನಿಕ ಅಸ್ತ್ರಗಳನ್ನು ಬಳಸುತ್ತಿದ್ದು, ಇದು ಇಂಥ ಶಸ್ತ್ರಾಸ್ತ್ರಗಳ ಜಾಗತಿಕ ನಿಷೇಧದ ಸ್ಪಷ್ಟ ಉಲ್ಲಂಘನೆ ಎಂಬ ಗಂಭೀರ ಆರೋಪವನ್ನು ಅಮೆರಿಕ ಮಾಡಿದೆ.

ಒಂದನೇ ವಿಶ್ವ ಯುದ್ಧದಲ್ಲಿ ಬಳಸಲಾದ ಕೋಲೋಪಿಕ್ರಿನ್ ಎಂಬ ಚಾಕಿಂಗ್ ಏಜೆಂಟ್, ಅಶ್ರುವಾಯುವನ್ನು ಉಕ್ರೇನ್ ಪಡೆಗಳ ವಿರುದ್ಧ ರಷ್ಯಾ ಬಳಸುತ್ತಿದೆ ಎಂದು ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ.

150ಕ್ಕೂ ಹೆಚ್ಚು ದೇಶಗಳು ಸಹಿ ಮಾಡಿ ದೃಢೀಕರಿಸಿರುವ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದದ ರಾಸಾಯನಿಕ ಅಸ್ತ್ರಗಳ ಒಡಂಬಡಿಕೆಯಡಿ ಈ ಅನಿಲಗಳ ಬಳಕೆಯನ್ನು ನಿಷೇಧಿಸಲಾಗಿತ್ತು. "ಇಂಥ ರಾಸಾಯನಿಕಗಳ ಬಳಕೆ ಕೇವಲ ಅಪರೂಪದ ಪ್ರಕರಣವಲ್ಲ. ಇದನ್ನು ರಷ್ಯಾ ಪಡೆಗಳು ಉಕ್ರೇನ್ ಪಡೆಗಳನ್ನು ಯುದ್ಧರಂಗದಿಂದ ಹಿಮ್ಮೆಟ್ಟಿಸಲು ಮತ್ತು ಯುದ್ಧರಂಗದಲ್ಲಿ ಆಯಕಟ್ಟಿನ ಲಾಭ ಪಡೆಯಲು ಬಳಸುತ್ತಿದೆ ಎಂದು ಆರೋಪಿಸಿದೆ.

ರಷ್ಯಾದ ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳ ಯೋಜನೆಯನ್ನು ಬೆಂಬಲಿಸುತ್ತಿರುವ ಮೂರು ಸರ್ಕಾರಿ ಸಂಸ್ಥೆಗಳನ್ನು ಮತ್ತು ನಾಲ್ಕು ಕಂಪನಿಗಳ ಮೇಲೆ ದಿಗ್ಬಂಧನ ವಿಧಿಸಲಾಗುವುದು ಎಂದೂ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

ಆದರೆ ಅಮೆರಿಕದ ಈ ಆರೋಪವನ್ನು ರಷ್ಯಾ ನಿರಾಕರಿಸಿದೆ. ಅಮೆರಿಕದಲ್ಲಿ ರಷ್ಯಾ ರಾಯಭಾರಿಯಾಗಿರುವ ಅನಟೋಲಿ ಅಂಟೊನೊವ್ ಈ ಬಗ್ಗೆ ಟೆಲಿಗ್ರಾಂ ಪೋಸ್ಟ್ ನಲ್ಲಿ, ರಷ್ಯಾ ರಾಸಾಯನಿಕ ಅಸ್ತ್ರ ಬಳಸುತ್ತಿದೆ ಎಂಬ ಆರೋಪ ದ್ವೇಷ ಕೆರಳಿಸುವ ಮತ್ತು ಸಮರ್ಥನೀಯವಲ್ಲದ ಆರೋಪ ಎಂದು ಹೇಳಿದ್ದಾರೆ. ಕ್ರೆಮ್ಲಿನ್ ವಕ್ತಾರ ಮಿಟ್ರಿ ಪೆಸ್ಕೋವ್ ಪ್ರತ್ಯೇಕ ಹೇಳಿಕೆ ನೀಡಿ ರಾಸಾಯನಿಕ ಅಸ್ತ್ರಗಳನ್ನು ಬಳಸಬಾರದು ಎಂಬ ಒಪ್ಪಂದಕ್ಕೆ ರಷ್ಯಾ ಬದ್ಧವಾಗಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News