ಇರಾಕ್ ಮತ್ತು ಸಿರಿಯಾದಲ್ಲಿ ವೈಮಾನಿಕ ದಾಳಿ ನಡೆಸಿದ ಅಮೇರಿಕ

Update: 2024-02-03 03:51 GMT

Photo: twitter.com/TIMEWorld

ವಾಷಿಂಗ್ಟನ್ : ಅಮೇರಿಕ ಪಡೆಗಳು ಇರಾಕ್ ಮತ್ತು ಸಿರಿಯಾದಲ್ಲಿ 80 ಕ್ಕೂ ಹೆಚ್ಚು ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂದು theguardian.com ವರದಿ ಮಾಡಿದೆ.

ಜೋರ್ಡಾನ್‌ನಲ್ಲಿ ಮೂವರು ಅಮೇರಿಕ ಸೈನಿಕರನ್ನು ಕೊಂದ ಡ್ರೋನ್ ದಾಳಿಗೆ ಪ್ರತೀಕಾರವಾಗಿ ಈ ದಾಳಿ ಪ್ರಾರಂಭಿಸಲಾಗಿದೆ ಎಂದು ಅಮೇರಿಕ ಅಧ್ಯಕ್ಷ ಜೋ ಬಿಡೆನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. "ನೀವು ಅಮೆರಿಕನ್ನರಿಗೆ ಹಾನಿ ಮಾಡಿದರೆ, ನಾವು ಪ್ರತಿಕ್ರಿಯಿಸುತ್ತೇವೆ" ಎಂದು ಎಚ್ಚರಿಸಿದ್ದಾರೆ.

US ಮಿಲಿಟರಿಯ ಸೆಂಟ್ರಲ್ ಕಮಾಂಡ್ ಮಧ್ಯರಾತ್ರಿ ಸುಮಾರು ನಡೆಸಿದ ಕಾರ್ಯಾಚರಣೆಯಲ್ಲಿ 125 ಕ್ಕೂ ಹೆಚ್ಚು ಬಾಂಬ್‌ ದಾಳಿ ನಡೆಸಿದೆ ಎಂದು ಹೇಳಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕಾರ್ಪ್ಸ್ (IRGC) ಕ್ಯುಡ್ಸ್ ಫೋರ್ಸ್ ಮತ್ತು ನಿಯಂತ್ರಿತ ಸೌಲಭ್ಯಗಳ ಗುರಿಯನ್ನು ಹೊಂದಿರುವ ಸೆಂಟ್‌ಕಾಮ್ ತನ್ನ ಹೇಳಿಕೆಯಲ್ಲಿ, "ಅಮೇರಿಕ ಮಿಲಿಟರಿ ಪಡೆಗಳು 85 ಕ್ಕೂ ಹೆಚ್ಚು ನೆಲೆಗಳ ಮೇಲೆ ದಾಳಿ ನಡೆಸಿದೆ. ಇದು ಸಂಯೋಜಿತ ಸೇನಾ ಗುಂಪಿನ ದಾಳಿ. ವೈಮಾನಿಕ ಸೇನೆ ಬಳಸಿ ಬಾಂಬ್ ದಾಳಿ ಮಾಡಲಾಗಿದೆ” ಎಂದು ಹೇಳಿದೆ.

ದಾಳಿಯಲ್ಲಿ ಇರಾನ್ ನ ಕಮಾಂಡ್ ಮತ್ತು ಕಂಟ್ರೋಲ್ ಕಾರ್ಯಾಚರಣೆ ಕೇಂದ್ರಗಳು, ಗುಪ್ತಚರ ಕಚೇರಿಗಳು, ರಾಕೆಟ್‌ಗಳು ಮತ್ತು ಕ್ಷಿಪಣಿಗಳು, ಲಾಜಿಸ್ಟಿಕ್ಸ್ ಮತ್ತು ಯುದ್ಧಸಾಮಗ್ರಿ ಪೂರೈಕೆ ಸರಪಳಿ ಸೌಲಭ್ಯಗಳಿಗೆ ಹಾನಿಯಾಗಿವೆ ಎಂದು ಸೆಂಟ್‌ಕಾಮ್ ಹೇಳಿದೆ. ಆದರೆ ದಾಳಿಯಿಂದ ಉಂಟಾಗಿರುವ ಸಾವು ನೋವುಗಳ ಬಗ್ಗೆ ಸ್ಪಷ್ಟವಾಗಿಲ್ಲ. ಪೂರ್ವ ಸಿರಿಯಾದಲ್ಲಿ ಅಮೇರಿಕ ನಡೆಸಿದೆ ಎಂದು ನಂಬಲಾದ ವೈಮಾನಿಕ ದಾಳಿಯಲ್ಲಿ ಇರಾನ್ ಪರ ಸೇನಾ ಗುಂಪಿನ 13 ಸದಸ್ಯರು ಕೊಲ್ಲಲ್ಪಟ್ಟಿದ್ದಾರೆ ಎಂದು ಸಿರಿಯನ್ ಅಬ್ಸರ್ವೇಟರಿ ಫಾರ್ ಹ್ಯೂಮನ್ ರೈಟ್ಸ್ ವಾರ್ ಮಾನಿಟರ್ ಹೇಳಿದೆ.

ಪೂರ್ವ ಡೀರ್ ಎಜ್-ಜೋರ್ ಪ್ರಾಂತ್ಯದಲ್ಲಿ ಇರಾನ್ ಬೆಂಬಲಿತ ಗುಂಪುಗಳು ನೆಲೆಸಿರುವ ಸೈಟ್‌ಗಳಲ್ಲಿ 17 ಸ್ಥಾನಗಳನ್ನು ಯುದ್ಧವಿಮಾನಗಳು ನಾಶಪಡಿಸಿದವು, ಅವುಗಳಲ್ಲಿ ಮೂರು ಅಲ್-ಮಯಾದೀನ್ ಮತ್ತು ಇರಾಕಿನ ಗಡಿಯ ಸಮೀಪವಿರುವ ಅಲ್ಬು ಕಮಾಲ್ ಅನ್ನು ಗುರಿಯಾಗಿಸಿಕೊಂಡಿವೆ ಎಂದು ಅಬ್ಸರ್ವೇಟರಿ ಸೇರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News