ರಶ್ಯಾ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಉಚ್ಚಾಟಿಸಿದ ಅಮೆರಿಕ
Update: 2023-10-07 17:05 GMT
ವಾಷಿಂಗ್ಟನ್ : ರಶ್ಯಾ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳನ್ನು ದೇಶ ಬಿಟ್ಟು ತೆರಳುವಂತೆ ಸೂಚಿಸಲಾಗಿದೆ ಎಂದು ಅಮೆರಿಕ ಹೇಳಿದೆ.
ಕೆಲ ವಾರಗಳ ಹಿಂದೆ ರಶ್ಯವು ಅಮೆರಿಕ ರಾಯಭಾರ ಕಚೇರಿಯ ಇಬ್ಬರು ಸಿಬಂದಿಗಳನ್ನು ಉಚ್ಛಾಟಿಸಿದ್ದಕ್ಕೆ ಪ್ರತಿಯಾಗಿ ಅಮೆರಿಕ ಈ ಕ್ರಮ ಕೈಗೊಂಡಿದೆ. ರಹಸ್ಯ ಮಾಹಿತಿ ಸಂಗ್ರಹಿಸುತ್ತಿದ್ದ ಮಾಜಿ ಕಾನ್ಸುಲರ್ ಉದ್ಯೋಗಿಯ ಜತೆ ಮಾಸ್ಕೋದಲ್ಲಿನ ಅಮೆರಿಕ ರಾಯಭಾರ ಕಚೇರಿಯ ಸಿಬಂದಿಗಳಾದ ಜೆಫ್ರಿ ಸಿಲಿನ್ ಮತ್ತು ಡೇವಿಡ್ ಬೆರ್ನ್‍ಸ್ಟೈನ್ ಸಂಪರ್ಕ ಹೊಂದಿರುವುದು ಖಚಿತಗೊಂಡ ಹಿನ್ನೆಲೆಯಲ್ಲಿ ವಾರದೊಳಗೆ ದೇಶದಿಂದ ತೆರಳುವಂತೆ ರಶ್ಯ ಆದೇಶಿಸಿತ್ತು. ಈ ಆರೋಪ ನಿರಾಧಾರ ಎಂದು ಅಮೆರಿಕ ತಳ್ಳಿಹಾಕಿದೆ.
`ನಮ್ಮ ರಾಜತಾಂತ್ರಿಕರಿಗೆ ರಶ್ಯ ಸರಕಾರದ ಕಿರುಕುಳದ ಪ್ರಕ್ರಿಯೆಯನ್ನು ಸಹಿಸುವುದಿಲ್ಲ' ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲರ್ ಹೇಳಿದ್ದಾರೆ.