ಹೌದಿಗಳ ಕ್ಷಿಪಣಿ ನಾಶಗೊಳಿಸಿದ ಅಮೆರಿಕದ ಪಡೆಗಳು
ವಾಷಿಂಗ್ಟನ್ : ಅಮೆರಿಕದ ಯುದ್ಧವಿಮಾನಗಳಿಗೆ ಬೆದರಿಕೆ ಒಡ್ಡುವ ರೀತಿಯಲ್ಲಿ ಯೆಮನ್ನಲ್ಲಿ ಹೌದಿಗಳು ಸಜ್ಜುಗೊಳಿಸಿದ್ದ ಕ್ಷಿಪಣಿಗಳು ಅಮೆರಿಕದ ವಾಯುದಾಳಿಯಲ್ಲಿ ನಾಶಗೊಂಡಿವೆ ಎಂದು ಮಧ್ಯಪ್ರಾಚ್ಯದಲ್ಲಿನ ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.
ಯುದ್ಧಗ್ರಸ್ತ ಯೆಮನ್ನ ಹೆಚ್ಚಿನ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿರುವ ಹೌದಿಗಳು ಕಳೆದ ನವೆಂಬರ್ನಿಂದ ಕೆಂಪು ಸಮುದ್ರದಲ್ಲಿ ಸಾಗುವ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಪ್ರಮುಖ ಅಂತರಾಷ್ಟ್ರೀಯ ಸಮುದ್ರ ಮಾರ್ಗವಾಗಿರುವ ಕೆಂಪು ಸಮುದ್ರದಲ್ಲಿ ಸಾಗುವ ಹಡಗುಗಳನ್ನು ಹೌದಿಗಳ ದಾಳಿಯಿಂದ ರಕ್ಷಿಸುವ ನಿಟ್ಟಿನಲ್ಲಿ ಅಮೆರಿಕ ನೇತೃತ್ವದಲ್ಲಿ ಮಿತ್ರರಾಷ್ಟ್ರಗಳ ಪಡೆಯ ಒಕ್ಕೂಟ ಕಾರ್ಯ ನಿರ್ವಹಿಸುತ್ತಿದ್ದು ಹೌದಿಗಳ ವಿರುದ್ಧ ಹಲವು ವೈಮಾನಿಕ ದಾಳಿ ನಡೆಸಿದೆ. ಶುಕ್ರವಾರ ಮಧ್ಯಾಹ್ನ ಅಮೆರಿಕದ ಪಡೆ ನಡೆಸಿದ ಸ್ವರಕ್ಷಣೆಯ ಕಾರ್ಯಾಚರಣೆಯಲ್ಲಿ ಅಮೆರಿಕದ ಯುದ್ಧವಿಮಾನಗಳನ್ನು ಗುರಿಯಾಗಿಸಿ ಹಾರಿಸಲು ಸಜ್ಜುಗೊಳಿಸಲಾಗಿದ್ದ ಕ್ಷಿಪಣಿಯನ್ನು ನಾಶಗೊಳಿಸಲಾಗಿದೆ. ಈ ಕ್ಷಿಪಣಿ ಈ ವಲಯದಲ್ಲಿರುವ ಅಮೆರಿಕದ ವಾಯುಪಡೆಗೆ ಬೆದರಿಕೆ ಒಡ್ಡುವುದನ್ನು ಖಾತರಿ ಪಡಿಸಿಕೊಂಡ ಬಳಿಕ ದಾಳಿ ನಡೆದಿದೆ ಎಂದು ಅಮೆರಿಕ ಹೇಳಿದೆ. ಈ ಮಧ್ಯೆ, ಕಳೆದ ತಿಂಗಳು ಹೌದಿಗಳ ಕ್ಷಿಪಣಿ ದಾಳಿಯಿಂದ ಹಾನಿಗೊಳಗಾಗಿ ದಕ್ಷಿಣ ಕೆಂಪು ಸಮುದ್ರದಲ್ಲಿ ಸ್ಥಗಿತಗೊಂಡಿದ್ದ ಬ್ರಿಟನ್ ಮಾಲಕತ್ವದ ಸರಕು ನೌಕೆ `ರುಬಿಮರ್' ಸರಕು ನೌಕೆ ಶನಿವಾರ ಸಮುದ್ರದಲ್ಲಿ ಮುಳುಗತೊಡಗಿದೆ ಎಂದು ವರದಿಯಾಗಿದೆ.
ಸೋಮವಾರ `ರುಬಿಮರ್'ನ ಪರಿಶೀಲನೆ ನಡೆಸಿದ್ದ ಯೆಮನ್ ಸರಕಾರದ ತಂಡ ಭಾಗಶಃ ಹಾನಿಗೊಳಗಾಗಿರುವ ಈ ನೌಕೆ ಎರಡು ದಿನದೊಳಗೆ ಮುಳುಗುವ ಸಾಧ್ಯತೆಯಿದೆ ಎಂದು ವರದಿ ನೀಡಿತ್ತು.