ಆಂತರಿಕ ವ್ಯವಹಾರದಲ್ಲಿ ಅಮೆರಿಕ ಹಸ್ತಕ್ಷೇಪ: ರಶ್ಯ, ಚೀನಾ ಆರೋಪ
ಬೀಜಿಂಗ್ : ಅಮೆರಿಕವು ಇತರ ದೇಶಗಳ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ನಡೆಸಿ ತನ್ನ ಬೇಳೆ ಬೇಯಿಸಿಕೊಳ್ಳುವ ಕಾರ್ಯನೀತಿಯನ್ನು ಅನುಸರಿಸುತ್ತಿದೆ ಎಂದು ರಶ್ಯ ಮತ್ತು ಚೀನಾಗಳು ಆರೋಪಿಸಿವೆ.
ಗುರುವಾರ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ನಡುವೆ ನಡೆದ ದೂರವಾಣಿ ಮಾತುಕತೆಯಲ್ಲಿ ಉಭಯ ಮುಖಂಡರು ಅಮೆರಿಕದ ಕಾರ್ಯನೀತಿಯನ್ನು ಖಂಡಿಸಿದರು ಎಂದು ರಶ್ಯ ಅಧ್ಯಕ್ಷರ ಕಚೇರಿಯ ಹೇಳಿಕೆ ತಿಳಿಸಿದೆ. ರಶ್ಯ ಮತ್ತು ಚೀನಾವನ್ನು ನಿಗ್ರಹಿಸುವ ಪ್ರಧಾನ ಉದ್ದೇಶವನ್ನು ಅಮೆರಿಕ ಹೊಂದಿರುವುದನ್ನು ಎರಡೂ ದೇಶಗಳು ಅರಿತುಕೊಂಡಿದೆ ಎಂದು ರಶ್ಯ ಅಧ್ಯಕ್ಷರ ಆಪ್ತ ಯೂರಿ ಉಷಕೋವ್ ಹೇಳಿದ್ದಾರೆ.
ಉಕ್ರೇನ್ ವಿರುದ್ಧದ ಯುದ್ಧದ ಬಳಿಕ ಪಾಶ್ಚಿಮಾತ್ಯ ದೇಶಗಳು ರಶ್ಯದ ವಿರುದ್ಧ ಕಠಿಣ ನಿರ್ಬಂಧ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ರಶ್ಯವು ಚೀನಾದ ಜತೆಗಿನ ಆರ್ಥಿಕ ವ್ಯವಹಾರ ಸಂಬಂಧವನ್ನು ಹೆಚ್ಚಿಸಿದೆ. ರಶ್ಯ ರಿಯಾಯಿತಿ ದರದಲ್ಲಿ ಒದಗಿಸುವ ತೈಲಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಚೀನಾವೂ ಪ್ರಯೋಜನ ಪಡೆದಿದೆ. ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧ ಕಳೆದ 2 ವರ್ಷಗಳಲ್ಲಿ ದಾಖಲೆ ಮಟ್ಟ ತಲುಪಿದ್ದು 2023ರಲ್ಲಿ 240.1 ಶತಕೋಟಿ ಡಾಲರ್ ದಾಟಿದ್ದು ಇದು 2022ಕ್ಕೆ ಹೋಲಿಸಿದರೆ 26%ದಷ್ಟು ಏರಿಕೆಯಾಗಿದೆ ಎಂದು ಮೂಲಗಳು ಹೇಳಿವೆ.