ರಿಪಬ್ಲಿಕನ್ ಅಧ್ಯಕ್ಷೀಯ ಆಕಾಂಕ್ಷಿ ವಿವೇಕ್ ರಾಮಸ್ವಾಮಿಗೆ ಜೀವ ಬೆದರಿಕೆ; ಓರ್ವನ ಬಂಧನ
ನ್ಯೂಯಾರ್ಕ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿ ವಿವೇಕ್ ರಾಮಸ್ವಾಮಿ ಹಾಗೂ ಅವರ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರಿಗೆ ಜೀವಬೆದರಿಕೆಯೊಡ್ಡಿದ ಆರೋಪದಲ್ಲಿ 30 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಸೋಮವಾರ ಬಂಧಿಸಲಾಗಿದೆ.
ನ್ಯೂಹ್ಯಾಂಪ್ಶೈರ್ನ ಡೋವರ್ ಪಟ್ಟಣದ ನಿವಾಸಿ ಟೈಲರ್ ಆ್ಯಂಡರ್ಸನ್ ಅವರನ್ನು ಶನಿವಾರ ಬಂಧಿಸಲಾಗಿದೆಯೆಂದು ಅಟಾರ್ನಿ ಕಾರ್ಯಾಲಯವು ಸೋಮವಾರ ತಿಳಿಸಿದೆ.
ಪೋರ್ಟ್ಸ್ ಪರ್ತ್ ನಲ್ಲಿ ತನ್ನ ಪರವಾಗಿ ನಡೆಯುವ ಪ್ರಚಾರ ಸಭೆಯಲ್ಲಿ ಭಾಗವಹಿಸುವಂತೆ ರಾಮಸ್ವಾಮಿ ಅವರು ಶುಕ್ರವಾರ ಆ್ಯಂಡರ್ಸನ್ ಸೇರಿದಂತೆ ಮತದಾರರಿಗೆ ಕಳೆದ ಶುಕ್ರವಾರ ಎಸ್ಎಂಎಸ್ ಕಳುಹಿಸಿದ್ದರು.
ಈ ಸಂದೇಶಕ್ಕೆ ಉತ್ತರಿಸಿದ್ದ ಆ್ಯಂಡರ್ಸನ್ ‘‘ ಭಾರೀ ಒಳ್ಳೆಯದು. ಈತನ ಮೆದುಳು ಹೊರಬರುವಂತೆ ಹೊಡೆತವನ್ನು ನೀಡಲು ನನಗೆ ದೊರೆತಿರುವ ಇನ್ನೊಂದು ಅವಕಾಶ ಇದಾಗಿದೆ’’ ಎಂದು ಹೇಳಿದ್ದನು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರನ್ನೂ ಕೊಲ್ಲುವುದಾಗಿ’ಯೂ ಆತ ಹೇಳಿದ್ದ. ಈ ಮೃತದೇಹಗಳನ್ನು ತಾನು ಏನು ಮಾಡಲಿದ್ದೇನೆಂಬ ಬಗ್ಗೆ ಆತ ಅಶ್ಲೀಲ ವಿವರಣೆಯನ್ನು ಕೂಡಾ ನೀಡಿದ್ದ.
ಆರೋಪಿಯು ಯಾವ ಅಭ್ಯರ್ಥಿಯ ಸಭೆಯನ್ನು ಗುರಿಯಿರಿಸಿದ್ದಾನೆಂದು ಅಮೆರಿಕದ ಆಟಾರ್ನಿ ಕಚೇರಿಯು ಬಹಿರಂಗಪಡಿಸಿರಲಿಲ್ಲ. ಆದರೆ ರಾಮಸ್ವಾಮಿ ಅವರನ್ನು ಗುರಿಪಡಿಸಿ ಈ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿತ್ತು ಎಂದು ಅವರ ಪ್ರಚಾರ ತಂಡವು ದೃಢಪಡಿಸಿದೆ.