ಇಸ್ರೇಲ್‍ಗೆ ಥಾಡ್ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಒದಗಿಸಲಿರುವ ಅಮೆರಿಕ
ವಾಷಿಂಗ್ಟನ್ : ಇಸ್ರೇಲ್ ಪಡೆಗಳಿಗೆ ಹೊಸ ಉತ್ತೇಜನ ನೀಡುವ ಕ್ರಮವಾಗಿ ಅತ್ಯಾಧುನಿಕ ಥಾಡ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಪೂರೈಸಲು ಅಮೆರಿಕ ನಿರ್ಧರಿಸಿರುವುದಾಗಿ ಉನ್ನತ ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಧ್ಯಕ್ಷ ಜೋ ಬೈಡನ್ ಆದೇಶದ ಮೇರೆಗೆ `ಟರ್ಮಿನಲ್ ಹೈ ಆಲ್ಟಿಟ್ಯೂಡ್ ಏರಿಯಾ ಡಿಫೆನ್ಸ್ ಬ್ಯಾಟರಿ' (ಥಾಡ್) ವ್ಯವಸ್ಥೆ ಮತ್ತು ಪಡೆಗಳನ್ನು ನಿಯೋಜಿಸಲು ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅಧಿಕಾರ ನೀಡಿದ್ದಾರೆ. ಥಾಡ್ ವಾಯು ವ್ಯವಸ್ಥೆಯು ಇಸ್ರೇಲ್‍ನ ಸನ್ನದ್ಧತೆಯನ್ನು ಹೆಚ್ಚಿಸಲಿದೆ ಎಂದು ಪೆಂಟಗಾನ್‍ನ ವಕ್ತಾರ ಮೇಜರ್ ಜನರಲ್ ಪ್ಯಾಟ್ ರೈಡರ್ ಘೋಷಿಸಿದ್ದಾರೆ.
ಇಸ್ರೇಲ್‍ನಲ್ಲಿರುವ ಮಿಲಿಟರಿ ಪಡೆಯನ್ನು ತಕ್ಷಣವೇ ತೆರವುಗೊಳಿಸುವಂತೆ ಅಮೆರಿಕಕ್ಕೆ ಇರಾನ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇಸ್ರೇಲ್‍ಗೆ ಹೆಚ್ಚುವರಿ ಮಿಲಿಟರಿ ನೆರವು ಒದಗಿಸುವ ನಿರ್ಧಾರ ಹೊರಬಿದ್ದಿದೆ. ಅಮೆರಿಕದ ಬ್ಯಾಲಿಸ್ಟಿಕ್ ಕ್ಷಿಪಣಿ ನಿರೋಧಕ ವ್ಯವಸ್ಥೆಯಾಗಿರುವ ಥಾಡ್ ತನ್ನ ಕ್ಷೇತ್ರದೊಳಗೆ ಬರುವ ಸಣ್ಣ, ಮಧ್ಯಮ ಮತ್ತು ಮಧ್ಯಂತರ ಶ್ರೇಣಿಯ ಕ್ಷಿಪಣಿಗಳನ್ನು ಹೊಡೆದುರುಳಿಸುತ್ತದೆ. `ಹಿಟ್ ಟು ಕಿಲ್' ವಿಧಾನವನ್ನು ಹೊಂದಿರುವ ಥಾಡ್, ಕ್ಷಿಪಣಿಗಳು ಗುರಿ ವಲಯವನ್ನು ತಲುಪುವ ಮೊದಲೇ ತುಂಡರಿಸುವ ಸಾಮರ್ಥ್ಯ ಹೊಂದಿದೆ.