ಮಧ್ಯಪ್ರಾಚ್ಯಕ್ಕೆ ನೌಕಾಪಡೆಯ ಯುದ್ಧವಿಮಾನ ರವಾನಿಸಿದ ಅಮೆರಿಕ
ವಾಶಿಂಗ್ಟನ್ : ಇರಾನ್ ಹಾಗೂ ಅದರ ಬೆಂಬಲಿತ ಗುಂಪುಗಳ ಸಂಭಾವ್ಯ ದಾಳಿಯಿಂದ ಇಸ್ರೇಲನ್ನು ರಕ್ಷಿಸುವ ಕ್ರಮವಾಗಿ ಮಧ್ಯಪ್ರಾಚ್ಯ ಸೇನಾನೆಲೆಗೆ ಹಡಗು ಆಧಾರಿತ ನೌಕಾಪಡೆಯ 12ಕ್ಕೂ ಅಧಿಕ ಯುದ್ಧ ವಿಮಾನಗಳನ್ನು ಅಮೆರಿಕ ರವಾನಿಸಿರುವುದಾಗಿ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಒಮಾನ್ ಕೊಲ್ಲಿಯಲ್ಲಿರುವ ಅಮೆರಿಕದ ಸಮರನೌಕೆ ಯುಎಸ್ಎಸ್ ಥಿಯೋಡರ್ ರೂಸ್ವೆಲ್ಟ್ನಿಂದ ಎಫ್ಎ-18 ಯುದ್ಧವಿಮಾನಗಳು ಹಾಗೂ ಇ-2ಡಿ ಹಾಕ್ಐ ಕಣ್ಗಾವಲು ವಿಮಾನ ಸೋಮವಾರ ಅಘೋಷಿತ ನೆಲೆಗೆ ಆಗಮಿಸಿದೆ . ಅಲಾಸ್ಕಾ ವಾಯುನೆಲೆಯಿಂದ 12 ಎಫ್-22 ಯುದ್ಧವಿಮಾನಗಳ ತುಕಡಿ ಮಧ್ಯಪ್ರಾಚ್ಯದತ್ತ ಹೊರಟಿರುವುದರಿಂದ ನೌಕಾಪಡೆಯ ಯುದ್ಧವಿಮಾನಗಳನ್ನು ತಾತ್ಕಾಲಿಕವಾಗಿ ನಿಯೋಜಿಸಿರುವುದಾಗಿ ವರದಿಯಾಗಿದೆ.
ಹಮಾಸ್ ಹಿರಿಯ ನಾಯಕ ಇಸ್ಮಾಯೀಲ್ ಹಾನಿಯೆಹ್ ಹತ್ಯೆಯ ಬಳಿಕ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿರುವುದರಿಂದ ವಲಯದಲ್ಲಿ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸುವಂತೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಆದೇಶಿಸಿದ್ದರು. ಈ ಮಧ್ಯೆ, ಇರಾಕ್ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಮಂಗಳವಾರ ನಡೆದ ರಾಕೆಟ್ ದಾಳಿಯಲ್ಲಿ ಅಮೆರಿಕದ ಐವರು ಸಿಬ್ಬಂದಿ ಹಾಗೂ ಇಬ್ಬರು ಗುತ್ತಿಗೆದಾರರು ಗಾಯಗೊಂಡಿರುವುದಾಗಿ ವರದಿಯಾಗಿದೆ.