ಮಾನವ ಹಕ್ಕುಗಳನ್ನು ಉಲ್ಲಂಘಿಸಿರುವ ಇಸ್ರೇಲ್ ಮಿಲಿಟರಿ ಘಟಕಕ್ಕೆ ನೆರವು ಮುಂದುವರಿಸಲಿರುವ ಅಮೆರಿಕ
ವಾಷಿಂಗ್ಟನ್: ಇನ್ನಷ್ಟು ಅಪರಾಧಗಳನ್ನು ತಡೆಯಲು ಇಸ್ರೇಲ್ ಸರಕಾರವು ಕ್ರಮಗಳನ್ನು ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸಿರುವ ಇಸ್ರೇಲಿ ಸೇನೆಯ ಘಟಕಕ್ಕೆ ಅಮೆರಿಕದ ಭದ್ರತಾ ನೆರವನ್ನು ಬೈಡೆನ್ ಆಡಳಿತವು ನಿರ್ಬಂಧಿಸುವುದಿಲ್ಲ ಎಂದು ವಿದೇಶಾಂಗ ಇಲಾಖೆಯು ತಿಳಿಸಿದೆ.
ನೆಟ್ಝಾ ಯೆಹುದಾ ಬಟಾಲಿಯನ್ ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡಿದೆ ಮತ್ತು ಇದು ಲೀಹಿ ಕಾನೂನನ್ನು ಹೇರುರುದನ್ನು ಅಗತ್ಯವಾಗಿಸುವಷ್ಟು ಗಂಭೀರವಾಗಿದೆ ಎಂದು ವಿದೆಶಾಂಗ ಇಲಾಖೆಯು ಕಳೆದ ಎಪ್ರಿಲ್ ನಲ್ಲಿ ನಿರ್ಧರಿಸಿತ್ತು. ಅತ್ಯಾಚಾರ,ಕೊಲೆ ಅಥವಾ ಚಿತ್ರಹಿಂಸೆಯಂತಹ ‘ಸಮಗ್ರ ಮಾನವ ಹಕ್ಕುಗಳ ಉಲ್ಲಂಘನೆ’ಗಳನ್ನು ಮಾಡುವ ವಿದೇಶಿ ಪಡೆಗಳಿಗೆ ಅಮೆರಿಕವು ತರಬೇತಿ ನೀಡುವುದನ್ನು ಅಥವಾ ಯುದ್ಧೋಪಕರಣಗಳನ್ನು ಪೂರೈಸುವುದನ್ನು ಈ ಕಾನೂನು ನಿಷೇಧಿಸುತ್ತದೆ.
ಮಾನವ ಹಕ್ಕುಗಳ ಉಲ್ಲಂಘನೆಗಳ ಆರೋಪಗಳನ್ನು ಹೊತ್ತಿರುವ ಇಸ್ರೇಲಿ ಬಟಾಲಿಯನ್ಗಳ ಮೇಲೆ ನಿರ್ಬಂಧಗಳನ್ನು ಹೇರಲು ಅಮೆರಿಕವು ಪರಿಶೀಲಿಸುತ್ತಿದೆ ಎನ್ನುವುದು ಕಳೆದ ಎಪ್ರಿಲ್ ನಲ್ಲಿ ಬಹಿರಂಗಗೊಂಡಾಗ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಮತ್ತು ಇತರ ಇಸ್ರೇಲಿ ನಾಯಕರು ಈ ಸಾಧ್ಯತೆಯನ್ನು, ಇಸ್ರೇಲಿ ಪಡೆಗಳು ಗಾಝಾ ಪಟ್ಟಿಯಲ್ಲಿ ಹಮಾಸ್ ವಿರುದ್ಧ ಯುದ್ಧ ಮಾಡುತ್ತಿರುವ ಸಮಯದಲ್ಲಿ ‘ಅಸಂಬಂದ್ಧತೆಯ ಉತ್ತುಂಗ ಮತ್ತು ನೈತಿಕತೆಯ ಕುಸಿತ ’ಎಂದು ಬಣ್ಣಿಸಿದ್ದರು.
ಆದರೆ ಇಸ್ರೇಲ್ ಆರೋಪಿತ ಘಟಕವನ್ನು ನಿರಂತರವಾಗಿ ಅಮೆರಿಕದ ನೆರವನ್ನು ಪಡೆಯಲು ಅರ್ಹವಾಗಿಸಲು ನ್ಯಾಯ ಮತ್ತು ಉತ್ತರದಾಯಿತ್ವದ ರೂಪದಲ್ಲಿ ‘ಪರಿಹಾರಕ್ಕಾಗಿ’ ಲೀಹಿ ಕಾನೂನಿನ ಮಾನದಂಡಗಳನ್ನು ಪೂರೈಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿತ್ತು ಎಂದು ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಅವರು ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದರು. ಹೇಳಿಕೆಯು ನೆಟ್ಝಾ ಯೆಹುದಾ ಘಟಕವನ್ನು ನಿರ್ದಿಷ್ಟವಾಗಿ ಹೆಸರಿಸಿಲ್ಲವಾದರೂ, ಅದು ಇಂತಹ ಕಣ್ಗಾವಲಿನಲ್ಲಿರುವ ಇಸ್ರೇಲ್ನ ಏಕೈಕ ಸೇನಾ ಘಟಕವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನೆಟ್ಝಾ ಯೆಹುದಾ ಮಿಲಟರಿ ಘಟಕವು ಗಾಝಾ ಯುದ್ಧಕ್ಕಿಂತ ಮೊದಲಿನಿಂದಲೂ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವನ್ನು ಎದುರಿಸುತ್ತಿದೆ.