ಇಸ್ರೇಲ್ ಮೇಲೆ ನೇರ ಮಿಲಿಟರಿ ದಾಳಿ ನಡೆಸಿದರೆ ಗಂಭೀರ ಪರಿಣಾಮ ಎದುರಿಸಬೇಕು : ಇರಾನ್‍ಗೆ ಅಮೆರಿಕ ಎಚ್ಚರಿಕೆ
ವಾಷಿಂಗ್ಟನ್ : ಹಿಜ್ಬುಲ್ಲಾ ಮೇಲೆ ಇಸ್ರೇಲ್‍ನ ದಾಳಿಗೆ ಪ್ರತಿಯಾಗಿ ಇಸ್ರೇಲ್ ಮೇಲೆ ನೇರ ದಾಳಿ ನಡೆಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಮಂಗಳವಾರ ಇರಾನ್‍ಗೆ ಎಚ್ಚರಿಕೆ ನೀಡಿದೆ.
ಇಸ್ರೇಲ್‍ನ ಸ್ವಯಂ ರಕ್ಷಣೆಯ ಹಕ್ಕನ್ನು ಅಮೆರಿಕ ಬೆಂಬಲಿಸುತ್ತದೆ ಎಂದು ರಕ್ಷಣಾ ಸಚಿವ ಲಾಯ್ಡ್ ಆಸ್ಟಿನ್ ಪುನರುಚ್ಚರಿಸಿದ್ದಾರೆ.
ಒಂದು ವೇಳೆ ಇಸ್ರೇಲ್ ವಿರುದ್ಧ ನೇರ ಮಿಲಿಟರಿ ದಾಳಿಯನ್ನು ಇರಾನ್ ಆಯ್ಕೆ ಮಾಡಿಕೊಂಡರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದವರು ಸಾಮಾಜಿಕ ಮಾಧ್ಯಮ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಸ್ರೇಲ್ ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್ ಜತೆಗಿನ ಮಾತುಕತೆಯಲ್ಲಿ `ಲೆಬನಾನ್ ಗಡಿಯುದ್ದಕ್ಕೂ ಆಕ್ರಮಣ ಮೂಲಸೌಕರ್ಯವನ್ನು ನಾಶಗೊಳಿಸಲು' ಇಸ್ರೇಲ್‍ಗೆ ನೆರವಾಗುವುದಾಗಿ ಆಸ್ಟಿನ್ ವಾಗ್ದಾನ ನೀಡಿದ್ದಾರೆ. ಅಕ್ಟೋಬರ್ 7ರ ಹಮಾಸ್ ದಾಳಿಯ ಶೈಲಿಯಲ್ಲಿಯೇ ಆಕ್ರಮಣ ನಡೆಸುವ ಹಿಜ್ಬುಲ್ಲಾದ ಯೋಜನೆಯನ್ನು ವಿಫಲಗೊಳಿಸಲು ಇಸ್ರೇಲ್‍ಗೆ ನಮ್ಮ ಬೆಂಬಲ ಅಚಲವಾಗಿದೆ ಎಂದವರು ಪುನರುಚ್ಚರಿಸಿದ್ದಾರೆ. ಗಡಿಯ ಎರಡೂ ಬದಿಗಳಲ್ಲಿ ನಾಗರಿಕ ಸುರಕ್ಷತೆಯನ್ನು ಖಚಿತಪಡಿಸಲು ರಾಜತಾಂತ್ರಿಕ ನಿರ್ಣಯದ ಅಗತ್ಯವಿದೆ ಎಂದು ಇದೇ ಸಂದರ್ಭ ಅಮೆರಿಕ ಪ್ರತಿಪಾದಿಸಿದೆ.