ಇರಾನ್ ದಾಳಿಗೆ ಇರಾಕ್‍ ನ ವಾಯುಪ್ರದೇಶ ಬಳಕೆ : ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಗೆ ದೂರು

Update: 2024-10-28 16:01 GMT

ಸಾಂದರ್ಭಿಕ ಚಿತ್ರ | PC : NDTV

ಬಗ್ದಾದ್ : ಇರಾನ್ ಮೇಲೆ ದಾಳಿ ನಡೆಸಲು ಇರಾಕ್‍ ನ ವಾಯುಪ್ರದೇಶವನ್ನು ಇಸ್ರೇಲ್ ಬಳಸಿರುವುದನ್ನು ಇರಾಕ್ ಖಂಡಿಸಿದ್ದು ಈ ಬಗ್ಗೆ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಲಿಖಿತ ದೂರು ನೀಡಿರುವುದಾಗಿ ವರದಿಯಾಗಿದೆ.

`ಅಕ್ಟೋಬರ್ 26ರಂದು ಇಸ್ರೇಲ್ ಆಡಳಿತ ಇರಾನ್ ಮೇಲೆ ದಾಳಿ ನಡೆಸಲು ಇರಾಕ್‍ ನ ವಾಯುಪ್ರದೇಶವನ್ನು ಬಳಸಿಕೊಂಡಿರುವುದು ಇರಾಕ್‍ನ ವಾಯುಪ್ರದೇಶ ಮತ್ತು ಸಾರ್ವಭೌಮತ್ವದ ಸ್ಪಷ್ಟ ಉಲ್ಲಂಘನೆಯಾಗಿದೆ ' ಎಂದು ವಿಶ್ವಸಂಸ್ಥೆ ಹಾಗೂ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಬರೆದಿರುವ ಪತ್ರದಲ್ಲಿ ಖಂಡಿಸಲಾಗಿದೆ.

ಈ ಉಲ್ಲಂಘನೆಯನ್ನು ಇಸ್ರೇಲ್‍ ನ ನಿಕಟ ಮಿತ್ರ ಅಮೆರಿಕದ ಜತೆಗಿನ ಮಾತುಕತೆಯ ಸಂದರ್ಭವೂ ಪ್ರಸ್ತಾಪಿಸಲಾಗುವುದು ಎಂದು ಇರಾಕ್ ಸರಕಾರದ ವಕ್ತಾರರು ಹೇಳಿದ್ದಾರೆ.

ಇಸ್ರೇಲ್ ಶನಿವಾರ ಇರಾನ್‍ ನ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಕೆಲವು ಇಸ್ರೇಲಿ ವಿಮಾನಗಳು ಇರಾಕ್‍ ನ ಅಮೆರಿಕ ಗಸ್ತು ವಾಯುನೆಲೆಯೊಳಗಿಂದ ದೀರ್ಘಶ್ರೇಣಿಯ ಕ್ಷಿಪಣಿಗಳನ್ನು ಪ್ರಯೋಗಿಸಿದೆ ಎಂದು ಇರಾನ್ ಮಿಲಿಟರಿ ಹೇಳಿದೆ.

`ತನ್ನ ವಾಯುಪ್ರದೇಶವನ್ನು ಬಳಸಲು ಯಾವುದೇ ನೆರೆಯ ದೇಶವು ಯೆಹೂದಿ ಆಡಳಿತಕ್ಕೆ ಅನುಮತಿ ನೀಡಿಲ್ಲ ಎಂಬುದು ಖಚಿತವಾಗಿದೆ. ಈ ಬಗ್ಗೆ ಇರಾಕ್‍ ನ ನಮ್ಮ ಮಿತ್ರರು ವಿಶ್ವಸಂಸ್ಥೆಯಲ್ಲಿ ಪ್ರತಿಭಟನೆ ದಾಖಲಿಸುತ್ತಾರೆ ಮತ್ತು ಇಂತಹ ಘಟನೆಗಳು ಮತ್ತೊಮ್ಮೆ ನಡೆಯಲು ಅವಕಾಶ ನೀಡುವುದಿಲ್ಲ ಎಂಬ ವಿಶ್ವಾಸವಿದೆ' ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೈ ಹೇಳಿದ್ದಾರೆ.

ಇರಾನ್ ಜತೆಗೆ ನಿಕಟ ಸಂಬಂಧ ಹೊಂದಿರುವ ಇರಾಕ್ ಅಮೆರಿಕದ ಜತೆ ಕಾರ್ಯತಂತ್ರದ ಪಾಲುದಾರಿಕೆಯನ್ನೂ ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News