ಇತರರನ್ನು ಗೌರವಿಸಲು ಅಮೆರಿಕ ಕಲಿಯಬೇಕು: ಪುಟಿನ್
ಮಾಸ್ಕೊ: ಅಮೆರಿಕದ ರಾಜಕಾರಣಿಗಳು ಇತರರನ್ನು ಗೌರವಿಸುವುದನ್ನು ಮೊದಲು ಕಲಿಯಬೇಕು ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆಗ್ರಹಿಸಿದ್ದಾರೆ.
‘ಒಂದು ವೇಳೆ ಎಲ್ಲಾ ಯುರೋಪ್ ಒಗ್ಗೂಡಿದರೆ ಏನಾದೀತು ಎಂಬುದನ್ನು ಊಹಿಸಿಕೊಳ್ಳಿ. ಆಗ ಪುಟಿನ್ ಮಂಡಿಯೂರಬೇಕು ಮತ್ತು ಈಗಿನಂತೆ ಉಪದ್ರವ ನೀಡಲು ಆಗದು’ ಎಂಬ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆಗೆ ಪುಟಿನ್ ಪ್ರತಿಕ್ರಿಯಿಸುತ್ತಿದ್ದರು. ‘ ಇದು ಹೊಣೆಗೇಡಿತನದ ಹೇಳಿಕೆಯಾಗಿದೆ. ರಶ್ಯದ ಹಿತಾಸಕ್ತಿಗಳನ್ನು ನಿಗ್ರಹಿಸಲಾಗದು. ರಶ್ಯದೊಂದಿಗಿನ ಯಾವುದೇ ಯುದ್ಧವು ಉಕ್ರೇನ್ ಸಂಘರ್ಷವನ್ನು ಸಂಪೂರ್ಣ ವಿಭಿನ್ನ ಮಟ್ಟಕ್ಕೆ ಕೊಂಡೊಯ್ಯಬಹುದು’ ಎಂದವರು ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಎಚ್ಚರಿಸಿದ್ದಾರೆ.
‘ಅಂದರೆ ಬೈಡನ್ ಹೇಳಿಕೆಯ ಪ್ರಕಾರ ಅಮೆರಿಕವು ರಶ್ಯದೊಂದಿಗೆ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ ಎಂದಾಯಿತು. ಹಾಗಾದರೆ ನಾವೂ ಸಿದ್ಧವಿದ್ದೇವೆ. ಪುರಾತನ ಹೇಳಿಕೆಯೊಂದಿದೆ - ನೀವು ಶಾಂತಿಯನ್ನು ಬಯಸುವಿರಾದರೆ ಯುದ್ಧಕ್ಕೆ ಸಿದ್ಧರಾಗಿ’ ಎಂದು. ಆದರೆ ನಾವು ಶಾಂತಿಯನ್ನು ಬಯಸುತ್ತೇವೆ. ರಶ್ಯ ಮತ್ತು ಚೀನಾ ಎರಡರೊಂದಿಗೂ ಯುದ್ಧ ಮಾಡುವುದು ಅಸಂಬದ್ಧವಾಗಿದೆ. ಬಲಾಢ್ಯ ಪರಮಾಣುಶಕ್ತ ದೇಶಗಳ ನಡುವಿನ ಯುದ್ಧದ ಬಗ್ಗೆ ಮಾತನಾಡುವುದಾದರೆ ಅದೊಂದು ಸಂಪೂರ್ಣ ವಿಭಿನ್ನ ಕತೆಯಾಗಲಿದೆ. ಸ್ವಸ್ಥ ಮನಸ್ಸಿನ ವ್ಯಕ್ತಿಗಳು ಈ ರೀತಿ ಮಾತನಾಡಲಾರರು’ ಎಂದು ಬೈಡನ್ ವಿರುದ್ಧ ವಾಗ್ದಾಳಿ ನಡೆಸಿದರು.