“ನಾವು ಮರಳಿ ನಿರ್ಮಿಸುತ್ತೇವೆ”: ಧ್ವಂಸಗೊಂಡಿರುವ ಗಾಝಾದಲ್ಲಿನ ತಮ್ಮ ನಿವಾಸಗಳಿಗೆ ಮರಳುತ್ತಿರುವ ಫೆಲೆಸ್ತೀನರ ಶಪಥ

Update: 2023-11-25 14:28 GMT

Photo: PTI 

ಗಾಝಾ: ‘ನಾವು ಮರಳಿ ನಿರ್ಮಿಸುತ್ತೇವೆ” ಎಂದು ಏಳು ವಾರಗಳ ಇಸ್ರೇಲ್ ಬಾಂಬ್ ದಾಳಿಯ ನಂತರ ಮಾನವೀಯ ನೆರವಿಗಾಗಿ ಘೋಷಿಸಲಾಗಿರುವ ಕದನ ವಿರಾಮದ ನಡುವೆ ಶನಿವಾರ ತನ್ನ ಮನೆಗೆ ಮರಳುತ್ತಿರುವ ತಹಾನಿ ಅಲ್-ನಜ್ಜರ್ ಎಂಬ ಮಹಿಳೆ ಶಪಥ ಮಾಡಿದ್ದಾಳೆ. ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಆಕೆಯ ಮನೆಯು ಧ್ವಂಸಗೊಂಡಿದ್ದು, ಈ ವೈಮಾನಿಕ ದಾಳಿಯಲ್ಲಿ ತನ್ನ ಕುಟುಂಬದ ಏಳು ಮಂದಿ ಸದಸ್ಯರು ಮೃತಪಟ್ಟಿದ್ದಾರೆ ಎಂದು ಆಕೆ ಹೇಳಿದ್ದಾಳೆ. ಹೀಗಾಗಿ ಆಕೆ ಇಲ್ಲಿಯವರೆಗೆ ನಿರಾಶ್ರಿತರ ಶಿಬಿರವೊಂದರಲ್ಲಿ ವಾಸಿಸುತ್ತಿದ್ದಳು ಎಂದು ndtv.com ವರದಿ ಮಾಡಿದೆ.

ನಾಲ್ಕು ದಿನಗಳ ಕಾಲ ಘೋಷಿಸಲಾಗಿರುವ ಕದನ ವಿರಾಮದಲ್ಲಿ ಈಗಾಗಲೇ 24 ಗಂಟೆಗಳು ಕಳೆದು ಹೋಗಿದ್ದು, ಸಾವಿರಾರು ಗಾಝಾ ನಿವಾಸಿಗಳು ಧಾರ್ಮಿಕ ನಿರಾಶ್ರಿತರ ಶಿಬಿರಗಳು ಹಾಗೂ ತಾತ್ಕಾಲಿಕ ಶಿಬಿರಗಳಿಂದ ತಹಾನಿ ಅಲ್-ನಜ್ಜರ್ ರಂತೆಯೆ ತಮ್ಮ ಮನೆಗಳಿಗೆ ಏನಾಗಿದೆ ಎಂದು ತಿಳಿದುಕೊಳ್ಳಲು ಕಷ್ಟಕರ ಪಯಣವನ್ನು ಪ್ರಾರಂಭಿಸಿದ್ದಾರೆ.

“ನಾವೆಲ್ಲಿ ಬದುಕುವುದು? ನಾವೆಲ್ಲಿ ಹೋಗುವುದು? ನಾವು ಗುಡಿಸಲೊಂದನ್ನು ನಿರ್ಮಿಸಿಕೊಳ್ಳಲು ಕೆಲ ಕಟ್ಟಿಗೆಗಳನ್ನು ಹುಡುಕುತ್ತಿದ್ದೇವಾದರೂ ಅವು ದೊರೆಯುತ್ತಿಲ್ಲ. ನಮ್ಮ ಕುಟುಂಬಕ್ಕೆ ಸೂರು ಒದಗಿಸಲು ಏನೂ ಉಳಿದಿಲ್ಲ” ಎಂದು ತನ್ನ ಮನೆಯ ಅವಶೇಷಗಳಡಿ ಹುದುಗಿ ಹೋಗಿರುವ ಲೋಹದ ಸಲಾಕೆಗಳನ್ನು ಎತ್ತಿಕೊಳ್ಳುತ್ತಾ ನಜ್ಜರ್ ಹೇಳುತ್ತಾರೆ.

ದಕ್ಷಿಣ ಗಾಝಾ ಪಟ್ಟಿಯಲ್ಲಿನ ಖಾನ್ ಯೂನಿಸ್ ಎಂಬುವವರ ಪತ್ನಿಯಾದ 58 ವರ್ಷದ ನಜ್ಜರ್, 2008 ಹಾಗೂ 2014ರಲ್ಲಿ ನಡೆದಿದ್ದ ಘರ್ಷಣೆಯ ಸಂದರ್ಭದಲ್ಲೂ ಇಸ್ರೇಲ್ ಸೇನಾಪಡೆಗಳು ತನ್ನ ಮನೆಯನ್ನು ನೆಲಸಮಗೊಳಿಸಿದ್ದವು ಎನ್ನುತ್ತಾರೆ.

ಇಡೀ ಮನೆಯೇ ಧ್ವಂಸಗೊಂಡಿದ್ದರೂ ವಿಸ್ಮಯಕಾರಿಯಾಗಿ ಇನ್ನೂ ಒಡೆಯದೆ ಉಳಿದಿರುವ ಲೋಟಗಳನ್ನು ಅವಶೇಷಗಳಡಿಯಿಂದ ಎತ್ತಿಕೊಂಡ ನಜ್ಜರ್, “ನಾವು ಮರಳಿ ನಿರ್ಮಿಸುತ್ತೇವೆ” ಎಂದು ದೃಢವಾದ ಧ್ವನಿಯಲ್ಲಿ ಹೇಳುತ್ತಾರೆ. ಅವರ ಮನೆಯ ಅವಶೇಷಗಳಡಿ ಸೈಕಲ್ ಹಾಗೂ ಧೂಳು ಮೆತ್ತಿದ ಬಟ್ಟೆಗಳೂ ಕಂಡು ಬಂದವು.

ಸುಮಾರು 23 ಲಕ್ಷ ಜನ ವಾಸಿಸುವ ಗಾಝಾ ಪಟ್ಟಿಯಲ್ಲಿ ಕದನ ವಿರಾಮ ಘೋಷಣೆಯಾಗಿರುವುದರಿಂದ, ಇನ್ನು ಕೆಲದಿನಗಳ ಅಂತರದಲ್ಲಿ ವೈಮಾನಿಕ ಹಾಗೂ ಟ್ಯಾಂಕರ್ ದಾಳಿ ನಡೆಯುವ ಸಾಧ್ಯತೆ ಇಲ್ಲದಿರುವುದರಿಂದ ಗಾಝಾ ನಿವಾಸಿಗಳು ಸುರಕ್ಷಿತವಾಗಿ ತಮ್ಮ ನಿವಾಸಗಳತ್ತ ತೆರಳುತ್ತಿದ್ದು, ತಮ್ಮ ಸ್ವತ್ತುಗಳಿಗೆ ಆಗಿರುವ ಹಾನಿಯ ಕುರಿತು ಅಂದಾಜಿಸಲು ಹಾಗೂ ಆಮದಾಗಿರುವ ನೆರವು ಸಾಮಗ್ರಿಗಳನ್ನು ಪಡೆಯಲು ಅವಕಾಶ ದೊರೆತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News