ಪಶ್ಚಿಮದಂಡೆ ಹಿಂಸಾಚಾರ: 4 ಇಸ್ರೇಲ್ ಪ್ರಜೆಗಳಿಗೆ ಅಮೆರಿಕ ನಿರ್ಬಂಧ
ವಾಷಿಂಗ್ಟನ್ : ಪಶ್ಚಿಮದಂಡೆಯಲ್ಲಿ ವಸಾಹತುಗಾರರ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿರುವ ನಾಲ್ವರು ಇಸ್ರೇಲ್ ಪ್ರಜೆಗಳ ವಿರುದ್ಧ ಅಮೆರಿಕ ನಿರ್ಬಂಧ ಜಾರಿಗೊಳಿಸಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಾರ್ಯನೀತಿಯ ಬಗ್ಗೆ ಅಮೆರಿಕದಲ್ಲಿ ಅಸಮಾಧಾನ ಹೆಚ್ಚುತ್ತಿರುವುದನ್ನು ಈ ಕ್ರಮ ಸಂಕೇತಿಸಿದೆ.
ಪಶ್ಚಿಮದಂಡೆಯಲ್ಲಿ ಫೆಲೆಸ್ತೀನೀಯರನ್ನು ಗುರಿಯಾಗಿಸಿ ಹಿಂಸೆ ನಡೆಸುವ ಇಸ್ರೇಲಿಗಳನ್ನು ಶಿಕ್ಷಿಸುವ ಉದ್ದೇಶ ಹೊಂದಿರುವ ಕಾರ್ಯನಿರ್ವಾಹಕ ಆದೇಶವನ್ನು ಗುರುವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಜಾರಿಗೊಳಿಸಿದ್ದಾರೆ. ಫೆಲೆಸ್ತೀನೀಯರ ಮೇಲೆ ದಾಳಿ ಮಾಡುವ, ಬೆದರಿಸುವ, ಅಥವಾ ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳುವ ವ್ಯಕ್ತಿಗಳ ವಿರುದ್ಧ ಹಣಕಾಸಿನ ನಿರ್ಬಂಧಗಳು ಅಥವಾ ವೀಸಾ ನಿರ್ಬಂಧಗಳನ್ನು ವಿಧಿಸುವ ವ್ಯವಸ್ಥೆಯನ್ನು ಈ ಆದೇಶವು ಸ್ಥಾಪಿಸುತ್ತದೆ. `ಈ ಕ್ರಮವು ಇಸ್ರೇಲಿಗಳು ಮತ್ತು ಫೆಲೆಸ್ತೀನೀಯರಿಗೆ ಸಮಾನವಾಗಿ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸಲು ಪ್ರಯತ್ನಿಸುತ್ತವೆ' ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಹೇಳಿದ್ದಾರೆ.
ಅಮೆರಿಕದಲ್ಲಿ ಈ ನಾಲ್ಕು ಮಂದಿಯ ಆಸ್ತಿಗಳನ್ನು ಸ್ಥಂಭನಗೊಳಿಸುವುದು ಮತ್ತು ಇವರೊಂದಿಗೆ ಅಮೆರಿಕನ್ನರು ಯಾವುದೇ ವ್ಯವಹಾರ ನಡೆಸುವುದನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಬೈಡನ್ ಅವರು ನೆತನ್ಯಾಹು ಜತೆ ನೇರವಾಗಿ ಮಾತನಾಡಿದ್ದಾರೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.