ಇಸ್ರೇಲ್ ದಾಳಿ: ಗಾಝಾ ಆಸ್ಪತ್ರೆಯೊಂದಿಗೆ ಸಂಪರ್ಕ ಕಳೆದುಕೊಂಡ ವಿಶ್ವ ಆರೋಗ್ಯ ಸಂಸ್ಥೆ

Update: 2023-11-12 11:26 GMT

Photo: PTI

ಜಿನಿವಾ: ಗಾಝಾ ನಗರದಲ್ಲಿನ ಅಲ್ ಶಿಫಾ ಆಸ್ಪತ್ರೆಯೊಂದಿಗೆ ಸಂಪರ್ಕ ಕಳೆದುಕೊಂಡಿದ್ದೇವೆ ಎಂದು ರವಿವಾರ ತಿಳಿಸಿರುವ ವಿಶ್ವ ಆರೋಗ್ಯ ಸಂಸ್ಥೆಯು, ಆಸ್ಪತ್ರೆಯಿಂದ ಪರಾರಿಯಾಗಲು ಯತ್ನಿಸಿದವರ ಮೇಲೆ ಗುಂಡು ಹಾರಿಸಲಾಗಿದ್ದು, ಅವರು ಗಾಯಗೊಂಡಿದ್ದಾರೆ ಇಲ್ಲವೆ ಮೃತಪಟ್ಟಿದ್ದಾರೆ ಎಂದು ಹೇಳಿದೆ.

ಆಸ್ಪತ್ರೆಯ ಮೇಲೆ ನಿರಂತರ ದಾಳಿ ನಡೆಯುತ್ತಿದೆ ಎಂಬ ವರದಿಗಳ ಬೆನ್ನಿಗೇ ಈ ಹೇಳಿಕೆ ಹೊರ ಬಿದ್ದಿದೆ.

ಈ ಹೇಳಿಕೆಯನ್ನು ‘ಎಕ್ಸ್’ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಗೆಬ್ರಯೇಸಸ್, ಇತ್ತೀಚಿನ ವರದಿಗಳ ಪ್ರಕಾರ, ಆಸ್ಪತ್ರೆಯನ್ನು ಟ್ಯಾಂಕರ್ ಗಳು ಸುತ್ತುವರಿದಿವೆ ಎಂದು ಹೇಳಿದ್ದಾರೆ.

ಆಸ್ಪತ್ರೆಯಿಂದ ಹೊರಹೋಗಲು ಯತ್ನಿಸಿದವರ ಮೇಲೆ ಗುಂಡು ಹಾರಿಸಲಾಗಿದ್ದು, ಅವರು ಗಾಯಗೊಂಡಿದ್ದಾರೆ ಇಲ್ಲವೆ ಮೃತಪಟ್ಟಿದ್ದಾರೆ ಎಂಬ ವರದಿಗಳಿವೆ.

ಆರೋಗ್ಯ ಕಾರ್ಯಕರ್ತರು, ಜೀವರಕ್ಷಕಗಳ ನೆರವಿನಲ್ಲಿರುವ ನವಜಾತ ಶಿಶುಗಳು ಸೇರಿದಂತೆ ನೂರಾರು ಅಸ್ವಸ್ಥ ಮತ್ತು ಗಾಯಗೊಂಡ ರೋಗಿಗಳು ಹಾಗೂ ನಿರಾಶ್ರಿತರಾಗಿ ಆಸ್ಪತ್ರೆಯಲ್ಲಿ ಆಶ್ರಯ ಪಡೆದಿರುವ ಜನರ ಯೋಗಕ್ಷೇಮದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ತೀವ್ರ ಕಳವಳ ವ್ಯಕ್ತಪಡಿಸಿದೆ.

ಗಾಝಾದಲ್ಲಿ ತಕ್ಷಣವೇ ಮಾನವೀಯ ಕದನ ವಿರಾಮ ಘೋಷಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯು ಆಗ್ರಹಿಸಿದೆ. ಇದರಿಂದ ಮಾತ್ರ ಜೀವಗಳನ್ನು ರಕ್ಷಿಸಿ, ಭಯಾನಕ ಸ್ವರೂಪದ ನರಳುವಿಕೆಯನ್ನು ತಪ್ಪಿಸಲು ಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News