ಕಾಣೆಯಾಗಿದ್ದ ಮಹಿಳೆಯ ಮೃತದೇಹ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ
ಜಕಾರ್ತ, ಜೂ.9: ನಾಪತ್ತೆಯಾಗಿದ್ದ ಇಂಡೋನೇಶ್ಯದ ಮಹಿಳೆಯೊಬ್ಬರ ಮೃತದೇಹ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆಯಾಗಿರುವುದಾಗಿ ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ದಕ್ಷಿಣ ಸುಲಾವೆಸಿ ಪ್ರಾಂತದ ಕಲೆಂಪಾಂಗ್ ಗ್ರಾಮದ ನಿವಾಸಿ 45 ವರ್ಷದ ಫರೀದಾ ಎಂಬವರು ಗುರುವಾರ ರಾತ್ರಿ ಮನೆಯಿಂದ ಹೊರಗೆ ಹೋದವರು ಮನೆಗೆ ಮರಳದೆ ನಾಪತ್ತೆಯಾಗಿದ್ದರು. ಮಹಿಳೆಯನ್ನು ಪತ್ತೆಹಚ್ಚುವ ಕಾರ್ಯ ಆರಂಭವಾಗಿತ್ತು. ಮರುದಿನ ಮನೆಗಿಂತ ಸ್ವಲ್ಪ ದೂರದಲ್ಲಿ ತನ್ನ ಪತ್ನಿಯ ಚಪ್ಪಲಿ, ಟಾರ್ಚ್ ಅನ್ನು ಗುರುತಿಸಿದ ಪತಿ ನೀಡಿದ ಮಾಹಿತಿಯಂತೆ ಗ್ರಾಮಸ್ಥರು ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಧ ನಡೆಸಿದಾಗ ಪೊದೆಗಳ ನಡುವೆ 16 ಅಡಿ ಉದ್ದದ ಹೆಬ್ಬಾವು ಕಂಡುಬಂದಿದೆ. ಅದರ ಹೊಟ್ಟೆಯ ಭಾಗ ದಪ್ಪವಾಗಿದ್ದರಿಂದ ಗ್ರಾಮಸ್ಥರು ಸಂಶಯಗೊಂಡು ಅದರ ಹೊಟ್ಟೆಯನ್ನು ಕತ್ತರಿಸಿದ್ದಾರೆ.
ಆಗ ಫರೀದಾಳ ಮೃತದೇಹ ಪತ್ತೆಯಾಗಿದೆ. ಹೆಬ್ಬಾವು ಅವರನ್ನು ಜೀವಂತ ನುಂಗಿತ್ತು ಎಂದು ಗ್ರಾಮದ ಮುಖ್ಯಸ್ಥ ಸುರಾದಿ ರೋಸಿಯನ್ನು ಉಲ್ಲೇಖಿಸಿ ಎಎಫ್ಪಿ ವರದಿ ಮಾಡಿದೆ. ಇಂಡೋನೇಶ್ಯದಲ್ಲಿ ಹೆಬ್ಬಾವುಗಳು ಮನುಷ್ಯರನ್ನು ಜೀವಂತ ನುಂಗುವ ಹಲವು ಪ್ರಕರಣ ವರದಿಯಾಗುತ್ತಿದೆ.