ದುಬಾರಿ ಚುನಾವಣೆಯೂ ಭ್ರಷ್ಟಾಚಾರದ ಮೂಲವೂ...

ಗ್ರಾಮ ಪಂಚಾಯತ್ ಸದಸ್ಯ ಚುನಾವಣೆಯಿಂದ ಹಿಡಿದು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭಾ ಚುನಾವಣೆಯಲ್ಲಿ ಮಾಡುವ ಖರ್ಚು ವೆಚ್ಚವನ್ನು ಮರಳಿ ಪಡೆಯಲು ಸರಕಾರ ರೂಪಿಸುವ ಅಭಿವೃದ್ಧಿ ಯೋಜನೆಗಳ ಮೇಲೆಯೇ ಅವಲಂಬನೆಯಾಗುವುದು ಅನಿವಾರ್ಯವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಆಡಳಿತ ವಿರೋಧಿ ಅಲೆ ತಡೆಯಲು ಮತ್ತು ತಂತ್ರಗಾರಿಕೆ ರೂಪಿಸಲು ಪ್ರಶಾಂತ್ ಕಿಶೋರ್‌ರಂತಹ ಜಾಣರ ತಂಡವನ್ನು ಪಕ್ಷಗಳು ಹಣ ನೀಡಿಯೇ ನಿಭಾಯಿಸಬೇಕು. ಅದಕ್ಕೆಲ್ಲ ಹಣ ಎಲ್ಲಿಂದ ಬರುತ್ತದೆ? ಸರಕಾರಿ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳು, ಶಾಸಕರ ಅನುದಾನಗಳಿಗೆ ಕನ್ನ ಹಾಕಲೇಬೇಕಾಗುತ್ತದೆ.

Update: 2024-05-04 05:20 GMT

ಹಿಡಿದ ಕೈಯ ಮೇಲೆ ಕತ್ತಲೆಯಯ್ಯ

ನೋಡುವ ಕಂಗಳ ಮೇಲೆ ಕತ್ತಲೆಯಯ್ಯ

ನೆನೆವ ಮನದ ಮೇಲೆ ಕತ್ತಲೆಯಯ್ಯ

ಕತ್ತಲೆ ಎಂಬುದು ಇತ್ತಲೆಯಯ್ಯ

ಗುಹೇಶ್ವರನೆಂಬುದು ಅತ್ತಲೆಯಯ್ಯ

-ಅಲ್ಲಮ

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕ್ಲೀಷೆಯೆನ್ನಿಸುವಷ್ಟು ಒಂದು ಮಾತನ್ನು ಪದೇಪದೇ ಹೇಳುತ್ತಿರುತ್ತಾರೆ: ‘‘ಮೈ ನಾ ಖಾವುಂಗಾ ಔರ್ ಖಾನೆ ನಹೀ ದೂಂಗ’’ ಎಂದು. ‘‘ನಾನೂ ತಿನ್ನುವುದಿಲ್ಲ. ಬೇರೆಯವರನ್ನೂ ತಿನ್ನಲು ಬಿಡುವುದಿಲ್ಲ’’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಮಾತುಗಳನ್ನು ಜನಸಾಮಾನ್ಯರು ಬಲವಾಗಿ ನಂಬಿದ್ದರು. ಭಾರತದಲ್ಲಿ ಭ್ರಷ್ಟಾಚಾರ ಸಂಪೂರ್ಣ ನಿರ್ಮೂಲನೆಯಾಗುತ್ತದೆ. ಅಷ್ಟು ಮಾತ್ರವಲ್ಲ; ವಿದೇಶದಲ್ಲಿನ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತಂದೇ ತರುತ್ತಾರೆ ಎಂದು ನಂಬಿಸಲಾಗಿತ್ತು. ಚುನಾವಣಾ ಬಾಂಡ್‌ಗಳ ಕರ್ಮಕಾಂಡ ಹೊರಬಂದ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭ್ರಷ್ಟಾಚಾರವನ್ನು ಸಾಂಸ್ಥೀಕರಣ ಗೊಳಿಸುತ್ತಿದ್ದಾರೆ ಎನ್ನುವುದು ನಿಚ್ಚಳವಾಯಿತು. ಚುನಾವಣಾ ಬಾಂಡ್‌ಗಳ ಮೂಲಕ ನಡೆಯುವ ಭ್ರಷ್ಟಾಚಾರದಿಂದ ಸರಕಾರದ ದೊಡ್ಡ ದೊಡ್ಡ ಯೋಜನೆಗಳು ಬಲಿಯಾಗುತ್ತವೆ. ಚುನಾವಣಾ ಅಭ್ಯರ್ಥಿಗಳ ಮಟ್ಟದಲ್ಲಿ ನಡೆಯುವ ಭ್ರಷ್ಟಾಚಾರ ಜನಸಾಮಾನ್ಯರನ್ನು ನಿತ್ಯ ಜೀವನದಲ್ಲಿ ಹೈರಾಣವಾಗಿಸುತ್ತದೆ. ಇದರ ವ್ಯಾಪ್ತಿ ಗ್ರಾಮ ಪಂಚಾಯತ್‌ನಿಂದ ವಿಧಾನಸೌಧದವರೆಗೂ, ಅಲ್ಲಿಂದ ಸಂಸತ್ ಭವನದವರೆಗೂ ವ್ಯಾಪಿಸಿರುತ್ತದೆ.

ದುಬಾರಿ ಚುನಾವಣೆಗಳು ಮತ್ತು ಬೃಹದಾಕಾರವಾಗಿ ಬೆಳೆದು ನಿಂತ ಗ್ರಾಹಕ ಸಂಸ್ಕೃತಿ ಒಟ್ಟು ವ್ಯವಸ್ಥೆಯನ್ನು ಭ್ರಷ್ಟಗೊಳಿಸಿವೆ. ಸರಕಾರಿ ಯೋಜನೆಗಳನ್ನು ರೂಪಿಸುವವರು ಭ್ರಷ್ಟಾಚಾರವನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಅರ್ಥಶಾಸ್ತ್ರಜ್ಞರು ಅಭಿವೃದ್ಧಿ ಯೋಜನೆಗಳ ಕುರಿತು ನಡೆಸುವ ಸಮೀಕ್ಷೆ, ಷರಾಗಳು ಭ್ರಷ್ಟಾಚಾರವನ್ನು ಹೊರತುಪಡಿಸಿ ಚರ್ಚೆಗೊಳಪಡುತ್ತವೆ. ಇಲ್ಲಿಯವರೆಗೆ ಭಾರತ ಮತ್ತು ಕರ್ನಾಟಕದ ಅಭಿವೃದ್ಧಿಗಾಗಿ ಖರ್ಚು ಮಾಡಿದ ಹಣದ ಅಂಕಿ ಅಂಶಗಳನ್ನು ಗಮನಿಸಿದರೆ ಸಾಕಷ್ಟು ಅಭಿವೃದ್ಧಿ ಆಗಬೇಕಿತ್ತು. ಆದರೆ ವಾಸ್ತವದಲ್ಲಿ ಅಭಿವೃದ್ಧಿ ಕಣ್ಣಿಗೆ ಗೋಚರಿಸುತ್ತಿಲ್ಲ ಮತ್ತು ಅಭಿವೃದ್ಧಿಯ ಫಲಗಳು ಜನಸಾಮಾನ್ಯರಿಗೆ ತಲುಪಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಭಿವೃದ್ಧಿ ಯೋಜನೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳ ಕುರಿತು ಮಾತನಾಡುವಾಗ ಅರ್ಥಶಾಸ್ತ್ರಜ್ಞರು, ಬುದ್ಧಿಜೀವಿಗಳು, ಚಿಂತಕರು ಹೆಚ್ಚು ಹಣ ಒದಗಿಸುವುದರ ಬಗ್ಗೆ ಒತ್ತುಕೊಟ್ಟು ಹೇಳುತ್ತಾರೆ. ಆದರೆ ಒದಗಿಸಿದ ಹಣ ಸಮರ್ಪಕವಾಗಿ ಬಳಕೆಯಾಗಿದ್ದರ ಬಗ್ಗೆ ಯಾರೂ ನಿಗಾವಹಿಸುವುದಿಲ್ಲ. ಅರ್ಥಶಾಸ್ತ್ರಜ್ಞರು, ಜನಪ್ರತಿನಿಧಿಗಳು, ಆಡಳಿತಗಾರರು ಭ್ರಷ್ಟಾಚಾರವನ್ನು ವ್ಯವಸ್ಥೆಯ ಭಾಗವೆಂದು ಒಪ್ಪಿಕೊಂಡಂತಿದೆ. ಆದರೆ ಭ್ರಷ್ಟಾಚಾರ ಈ ಹೊತ್ತಿಗೂ ರಾಜಕಾರಣಿಗಳಿಗೆ ಆರೋಪ-ಪ್ರತ್ಯಾರೋಪದ ಪ್ರಮುಖ ವಿಷಯವಾಗಿದೆ. ಅಷ್ಟು ಮಾತ್ರವಲ್ಲ ಪ್ರತಿಯೊಬ್ಬ ರಾಜಕಾರಣಿ ತಾನು ಸತ್ಯ ಹರಿಶ್ಚಂದ್ರನ ಅಪರಾವತಾರ ಎಂದು ಬಿಂಬಿಸಿಕೊಳ್ಳಲು ಹವಣಿಸುತ್ತಿರುತ್ತಾರೆ.

ಇಲ್ಲಿಯವರೆಗೆ ಯಾವೊಬ್ಬ ರಾಜಕಾರಣಿಯೂ ‘‘ದುಬಾರಿ ಚುನಾವಣೆಗಳ ಕಾರಣಕ್ಕೆ ನಾನು ಭ್ರಷ್ಟನಾಗಿದ್ದೇನೆ’’ ಎಂದು ಬಹಿರಂಗವಾಗಿ ಒಪ್ಪಿಕೊಂಡಿಲ್ಲ. ಪ್ರತೀ ಚುನಾವಣೆಯಲ್ಲಿ ಅಭ್ಯರ್ಥಿಗಳು ಆಸ್ತಿ ವಿವರವನ್ನು ‘ತಾಂತ್ರಿಕ’ ಅಗತ್ಯ ಪೂರೈಸಲು ನೀಡುತ್ತಾರೆ ಹೊರತು ನೈಜ ಸಂಗತಿಗಳನ್ನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ. ದಿನದ 24 ತಾಸು, ವರ್ಷದ 365 ದಿನಗಳು ಸಮಾಜ ಸೇವೆ ಮಾಡುವ ರಾಜಕಾರಣಿಗಳಿಗೆ ನಿರ್ದಿಷ್ಟ ಉದ್ಯೋಗ ಮತ್ತು ಆದಾಯ ಎಂಬುದು ಇರುವುದಿಲ್ಲ. ಆದರೂ ಆದಾಯ ಹೆಚ್ಚುತ್ತಲೇ ಇರುತ್ತದೆ. ಚುನಾವಣೆಯಲ್ಲಿ ಗೆಲುವಿನ ಖಾತ್ರಿ ಇರುವುದಿಲ್ಲವಾದರೂ ಕೋಟಿ ಕೋಟಿ ಹಣವನ್ನು ಖರ್ಚು ಮಾಡುತ್ತಾರೆ. ಹಾಗೆ ನೋಡಿದರೆ ರಾಜಕಾರಣಿಗಳ ಪಾಲಿಗೆ ಚುನಾವಣೆ ಎಂಬುದು ಅಕ್ಷರಶಃ ಜೂಜು. ಜೂಜಿನಲ್ಲಿ ಕಳೆದುಕೊಂಡಿದ್ದರ ಹತ್ತು ಪಟ್ಟು ಮತ್ತೆ ಸಂಪಾದಿಸುತ್ತೇನೆ ಎಂಬ ವಿಶ್ವಾಸ ಹೊಂದಿರುವವರು ಮಾತ್ರ ಚುನಾವಣೆಗೆ ಸ್ಪರ್ಧಿಸುವ ಸಾಹಸ ಮಾಡುತ್ತಾರೆ. ಆತ್ಮಕ್ಕೆ ಗೊತ್ತಿರುವ ಸಂಗತಿ ಬುದ್ಧಿ ಜಾಣ್ಮೆಯಿಂದ ಬಚ್ಚಿಡುತ್ತಾ ಚುನಾವಣೆ ಎಂಬ ಜೂಜನ್ನು ಆಡುತ್ತಿರುತ್ತದೆ. ಅಂತಹ ಆತ್ಮ ಮತ್ತು ಜಾಣ ಬುದ್ಧಿಯನ್ನು ಹೊಂದಿರುವ ರಾಜಕಾರಣಿಗಳು ಆತ್ಮವಂಚನೆಯ ಸ್ಪರ್ಧೆಯನ್ನು ಎಷ್ಟು ದಿನಗಳ ಕಾಲ ಮುಂದುವರಿಸಬಹುದು? ಚುನಾವಣೆ ಮತ್ತು ಆ ಮೂಲಕ ಹುಟ್ಟಿಕೊಳ್ಳುವ ಭ್ರಷ್ಟಾಚಾರದ ತಿರುಗಣೆಯಲ್ಲಿ ಕೊನೆ ಮೊದಲಿಲ್ಲದ ಪ್ರಯಾಣ ನಡೆಸುವ ರಾಜಕಾರಣಿ ಪರಮ ಭ್ರಷ್ಟ, ನೀಚ, ಲೂಟಿಕೋರ ಎಂಬೆಲ್ಲ ಬಿರುದಾವಳಿಗಳನ್ನು ಅನಿವಾರ್ಯವಾಗಿ ಸ್ವೀಕರಿಸಲೇಬೇಕು. ಭ್ರಷ್ಟಾಚಾರ ಎಂಬ ವಿಷವರ್ತುಲದಲ್ಲಿ ಭಾಗಿದಾರರಾಗಿರುವ ಅಧಿಕಾರಿಗಳು, ಗುತ್ತಿಗೆದಾರರು, ಪವರ್ ಬ್ರೋಕರ್‌ಗಳು ಮತ್ತು ಮಾಧ್ಯಮದ ಬೃಹಸ್ಪತಿಗಳು ಕಟಕಟೆಯಲ್ಲಿ ನಿಲ್ಲುವ ಸರದಿ ಬರುವವರೆಗೆ ಪ್ರೇಕ್ಷಕರಂತೆ ಎಂಜಾಯ್ ಮಾಡುತ್ತಿರುತ್ತಾರೆ.

ಈ ಬಾರಿಯ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೂ ಮೊದಲೇ ಹೆಂಡ, ಹಣ ಹಂಚಿಕೆಯ ವಿರಾಟ ದರ್ಶನ ಮಾಡಿಸುವ ಸ್ಫೋಟಕ ಮಾಹಿತಿಯನ್ನು ಸ್ವತಃ ಕೇಂದ್ರ ಚುನಾವಣಾ ಆಯೋಗವೇ ಬಹಿರಂಗಪಡಿಸಿದೆ. ಅಷ್ಟು ಮಾತ್ರವಲ್ಲ ಆ ಅಂಕಿ ಅಂಶ ನೋಡಿ ಬೆಚ್ಚಿ ಬಿದ್ದಿದೆ. ಸ್ಪರ್ಧಾ ಕಣದಲ್ಲಿರುವ ಎಲ್ಲಾ ಪಕ್ಷದ ಅಭ್ಯರ್ಥಿಗಳು ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಹಣ, ಹೆಂಡ ಮತ್ತು ಉಚಿತ ಉಡುಗೊರೆಗಳು ಅಚಾತುರ್ಯದಿಂದ ಚುನಾವಣಾ ಆಯೋಗದ ಅಧಿಕಾರಿಗಳು ನಿಯೋಜಿಸಿದ ಸಿಬ್ಬಂದಿಯ ಕೈವಶವಾದದ್ದು ಅಲ್ಪ ಪ್ರಮಾಣದ್ದು ಮಾತ್ರ. ಅಧಿಕಾರಿಗಳು ವಶಪಡಿಸಿಕೊಂಡಿರುವ ಹಣ, ಹೆಂಡ ಮತ್ತು ಉಚಿತ ಉಡುಗೊರೆಗಳು ಅಭ್ಯರ್ಥಿಗಳ ಮತ್ತು ರಾಜಕೀಯ ಪಕ್ಷಗಳ ಭ್ರಷ್ಟ ಮನಸ್ಥಿತಿಯನ್ನು ಅಡ್ಡದಾರಿ ಹಿಡಿದಾದರೂ ಸರಿ ಹೇಗಾದರೂ ಮಾಡಿ ಚುನಾವಣೆ ಗೆಲ್ಲಬೇಕು, ಅಧಿಕಾರ ಹಿಡಿಯಬೇಕು ಎಂಬ ಇರಾದೆಯನ್ನು ಖಚಿತಪಡಿಸುತ್ತದೆ. ಈ ಭ್ರಷ್ಟ ವಿದ್ಯಮಾನ ಒಂದು ಪಕ್ಷ, ಒಬ್ಬ ವ್ಯಕ್ತಿ ಮತ್ತು ಒಂದು ರಾಜ್ಯಕ್ಕೆ ಸೀಮಿತವಾಗಿ ಉಳಿದಿಲ್ಲ. 2024ರ ಲೋಕಸಭಾ ಚುನಾವಣೆಯು ಹಿಂದೆಂದಿಗಿಂತಲೂ ಹೆಚ್ಚು ಭ್ರಷ್ಟ ಚುನಾವಣೆ ಎಂಬುದನ್ನು ಆಯೋಗ ಬಹಿರಂಗಪಡಿಸಿದ ಅಂಕಿ ಅಂಶಗಳೇ ಸಾಕ್ಷಿ ನುಡಿಯುತ್ತವೆ.

2019ರ ಲೋಕಸಭಾ ಚುನಾವಣೆಯಲ್ಲಿ 3,475 ಕೋಟಿ ಮೊತ್ತದ ಹಣ, ಹೆಂಡ ಮತ್ತು ಉಚಿತ ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಮಾಹಿತಿಯನ್ನು ಎಲ್ಲಾ ಹಂತದ ಚುನಾವಣೆ ನಡೆದ ಮೇಲೆ ಒದಗಿಸಲಾಗಿತ್ತು. ಆದರೆ ಚುನಾವಣಾ ಆಯೋಗವು ಎಪ್ರಿಲ್ 13ರವರೆಗೆ ದೇಶಾದ್ಯಂತ ಜಪ್ತಿ ಮಾಡಿದ ಹಣ, ಹೆಂಡ ಮತ್ತು ಉಚಿತ ಉಡುಗೊರೆಗಳ ಮಾಹಿತಿ ಒದಗಿಸಿದೆ. ಮೊದಲ ಹಂತದ ಮತದಾನಕ್ಕೂ ಮೊದಲೇ ರೂ. 4,658.167 ಕೋಟಿ ಮೊತ್ತದ ಹಣ, ಹೆಂಡ ಮತ್ತು ಉಡುಗೊರೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದು 75 ವರ್ಷಗಳ ಇತಿಹಾಸದಲ್ಲೇ ವಶಪಡಿಸಿಕೊಂಡ ಅತ್ಯಧಿಕ ಮೊತ್ತ. ಎಲ್ಲಾ ಹಂತದ ಚುನಾವಣೆಗಳು ಮುಗಿಯುವವರೆಗೆ ಈ ಮೊತ್ತ ಮತ್ತಷ್ಟು ಹೆಚ್ಚಾಗಬಹುದು. ಇಲ್ಲಿಯವರೆಗೂ ಜಪ್ತಿ ಮಾಡಲಾದ ಹಣದ ಸರಾಸರಿ ಪ್ರಮಾಣ ದಿನಕ್ಕೆ 100 ಕೋಟಿಯಷ್ಟಿದೆ. ಆಶ್ಚರ್ಯದ ಸಂಗತಿಯೆಂದರೆ; ಭಾರತೀಯ ಜನತಾ ಪಕ್ಷದ ಸರಕಾರ ಇರುವ ರಾಜ್ಯಗಳಲ್ಲಿ ಅತಿ ಹೆಚ್ಚು ಮೊತ್ತದ ಹಣ, ಹೆಂಡ ಮತ್ತು ಉಚಿತ ಉಡುಗೊರೆಗಳನ್ನು ಜಪ್ತಿ ಮಾಡಲಾಗಿದೆ. ರಾಜಸ್ಥಾನ ರಾಜ್ಯದಲ್ಲಿ 778.52 ಕೋಟಿ ಮೊತ್ತದ ಅಕ್ರಮವಾಗಿ ಸಾಗಿಸುತ್ತಿದ್ದ ಹಣ, ಹೆಂಡ ಇತ್ಯಾದಿ ಅಧಿಕಾರಿಗಳ ಕೈವಶವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಂತ ರಾಜ್ಯ ಗುಜರಾತ್‌ನಲ್ಲಿ 605.335 ಕೋಟಿ ಮೊತ್ತದ ಹಣ, ಹೆಂಡವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ರೂ. 100 ಕೋಟಿ ಮೊತ್ತದ ಮೇಲೆ ಇರುವ ಹಣ, ಹೆಂಡದ ಮಾಹಿತಿಯನ್ನು ಮಾತ್ರ ಇಲ್ಲಿ ನೀಡಲಾಗಿದೆ. ತಮಿಳುನಾಡಿನಲ್ಲಿ ರೂ. 460.849 ಕೋಟಿ, ಪಂಜಾಬ್‌ನಲ್ಲಿ ರೂ. 311.844 ಕೋಟಿ, ಕರ್ನಾಟಕದಲ್ಲಿ ರೂ. 281.432 ಕೋಟಿ, ದಿಲ್ಲಿಯಲ್ಲಿ ರೂ. 236 ಕೋಟಿ, ಪಶ್ಚಿಮ ಬಂಗಾಳದಲ್ಲಿ ರೂ. 219.604 ಕೋಟಿ, ಉತ್ತರ ಪ್ರದೇಶದಲ್ಲಿ ರೂ. 145.768 ಕೋಟಿ, ಬಿಹಾರದಲ್ಲಿ ರೂ. 155.76 ಕೋಟಿ, ಅಸ್ಸಾಮಿನಲ್ಲಿ ರೂ. 141.12 ಕೋಟಿ, ಆಂಧ್ರಪ್ರದೇಶದಲ್ಲಿ ರೂ. 125.974 ಕೋಟಿ, ಮಧ್ಯಪ್ರದೇಶದಲ್ಲಿ ರೂ. 112.34 ಕೋಟಿ ಮತ್ತು ಒಡಿಶಾದಲ್ಲಿ ರೂ. 107 ಕೋಟಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಟ್ಟು ರೂ. 4,658.167 ಕೋಟಿ ಮೊತ್ತದ ಹಣ(ನಗದು), ಹೆಂಡ, ಉಚಿತ ಉಡುಗೊರೆ ಮತ್ತು ಡ್ರಗ್ಸನ್ನು ಐಟಿ ಅಧಿಕಾರಿಗಳು, ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದೆಲ್ಲ ಮೊದಲ ಹಂತದ ಚುನಾವಣೆಗೂ ಮುಂಚೆ ನಡೆಸಿದ ದಾಳಿಗಳಲ್ಲಿ ಸಿಕ್ಕ ಮಾಲು. ಚುನಾವಣಾ ಆಯೋಗವು ಈ ಮಾಹಿತಿಯನ್ನು ಅಭ್ಯರ್ಥಿ ಮತ್ತು ಪಕ್ಷವಾರು ನೀಡಿದ್ದರೆ ಚೆನ್ನಾಗಿತ್ತು. ಇಷ್ಟು ದೊಡ್ಡ ಮೊತ್ತದ ಹಣ, ಹೆಂಡ ಇತ್ಯಾದಿ ಜಪ್ತಿಯಾಗಿದ್ದರೂ ಇದು ಅಕ್ರಮ ಎಂದು ಯಾವ ಪಕ್ಷದ ರಾಜಕಾರಣಿಯೂ ದೊಡ್ಡದನಿಯಲ್ಲಿ ಸುದ್ದಿ ಮಾಡಲಿಲ್ಲ.

ಇನ್ನು ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ಈ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಮಂತ್ರಿ ಡಾ. ಕೆ. ಸುಧಾಕರ್ ಅವರಿಗೆ ಸೇರಿದ ರೂ. 4.8 ಕೋಟಿ ನಗದು ವಶಪಡಿಸಿಕೊಂಡಿದ್ದು ತುಸು ಸುದ್ದಿಯಾಯಿತು. ಕಾಂಗ್ರೆಸ್ ಪಕ್ಷದವರು ಡಾ.ಕೆ. ಸುಧಾಕರ್ ಟಾರ್ಗೆಟ್ ಮಾಡಿ ಟೀಕೆಯನ್ನೂ ಮಾಡಿದರು. ಕಲಬುರಗಿ ರೈಲು ನಿಲ್ದಾಣದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಮೇಯರ್ ಶರಣು ಮೋದಿಯವರ ಕಾರಿನಲ್ಲಿ ರೂ. 2 ಕೋಟಿ ನಗದನ್ನು ಅಕ್ರಮವಾಗಿ ಸಾಗಿಸುವ ಸಂದರ್ಭದಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚುನಾವಣಾ ಆಯೋಗ ನಿಯೋಜಿಸಿದ್ದ ಅಧಿಕಾರಿಗಳ ಕಣ್ಣು ತಪ್ಪಿಸಿ ಎಲ್ಲ ಪಕ್ಷದ ಅಭ್ಯರ್ಥಿಗಳು, ನಾಯಕರು ಹಣ, ಹೆಂಡ, ಉಚಿತ ಉಡುಗೊರೆಗಳನ್ನು ಸರಿಯಾದ ಜಾಗಕ್ಕೆ ತಲುಪಿಸಿರುತ್ತಾರೆ. ಒಂದು ಅಂದಾಜಿನ ಪ್ರಕಾರ ಸೋಲುವ ಅಥವಾ ಗೆಲ್ಲುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಪ್ರತೀ ಲೋಕಸಭಾ ಕ್ಷೇತ್ರಕ್ಕೆ ಸರಾಸರಿ ರೂ. 50 ಕೋಟಿ ಹಣವನ್ನು ಖರ್ಚು ಮಾಡುತ್ತಾರೆ. ವಿಧಾನಸಭೆ, ವಿಧಾನ ಪರಿಷತ್, ಬಿಬಿಎಂಪಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳಲ್ಲೂ ಹಣ ಹೆಂಡ, ಉಚಿತ ಉಡುಗೊರೆಗಳನ್ನು ಹಂಚಲಾಗುತ್ತದೆ. ಹಣ, ಹೆಂಡ ಹಂಚಿದವರಿಗೇ ಮತದಾರ ಒಲಿಯುತ್ತಾನೆ ಎಂಬುದು ಗ್ಯಾರಂಟಿ ಇಲ್ಲ. ಮತದಾರ ನಿರ್ಧಾರವನ್ನು ಸಮಯ, ಸಂದರ್ಭಕ್ಕೆ ತಕ್ಕಂತೆ ತೆಗೆದುಕೊಂಡಿರುತ್ತಾನೆ.

ರೂ. 25 ಕೋಟಿ ಖರ್ಚು ಮಾಡಿ ಗೆಲ್ಲುವ ಅಭ್ಯರ್ಥಿ ಯಾವುದೇ ಪಕ್ಷದವನಿರಲಿ, ಶಾಸಕನೋ, ಸಂಸದನೋ ಆದಾಗ ತಾನು ಮಾಡಿದ ಖರ್ಚಿನ ದುಪ್ಪಟ್ಟು ಹಣವನ್ನು ಹೇಗಾದರೂ ಮಾಡಿ ಮರಳಿ ಪಡೆಯಲು ಹವಣಿಸುತ್ತಾನೆ. ಕೆಲವು ಜನ ಸಾಲ ಸೋಲ ಮಾಡಿ ಚುನಾವಣೆ ಎದುರಿಸಿರುತ್ತಾರೆ. ಯಾವ ಪಕ್ಷವೂ ಚುನಾವಣಾ ಖರ್ಚಿಗಾಗಿ ಅಭ್ಯರ್ಥಿಗಳಿಗೆ ಹೆಚ್ಚು ಹಣ ಕೊಡುವುದಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತರೆಂದು ಹೆಚ್ಚೆಂದರೆ ಒಂದು, ಎರಡು ಕೋಟಿ ರೂ. ನೀಡುತ್ತಾರೆ. ಕೆಲವರು ಎರಡು ಮೂರು ಬಾರಿ ಚುನಾವಣೆ ಸೋತು ಗೆದ್ದಿರುತ್ತಾರೆ. ಅಂತಹವರು ಹಿಂದಿನ ಎಲ್ಲಾ ಚುನಾವಣೆಗಳ ಮತ್ತು ಮುಂದಿನ ಚುನಾವಣೆಯ ಖರ್ಚನ್ನೂ ಐದು ವರ್ಷಗಳ ಅವಧಿಯಲ್ಲೇ ಸಂಪಾದಿಸುವ ಒತ್ತಡಕ್ಕೆ ಒಳಗಾಗಿರುತ್ತಾರೆ. ಕೆಲ ಶ್ರೀಮಂತ ಶಾಸಕರು ಕಷ್ಟಕಾಲದಲ್ಲಿ ಪಕ್ಷಕ್ಕೆ ಫಂಡ್ ನೀಡಿರುತ್ತಾರೆ. ಶಾಸಕರಾಗಿದ್ದರೆ ಶಾಸಕ ಸ್ಥಾನದ ಬಲದ ಮೇಲೆಯೇ ಎಷ್ಟು ಸಾಧ್ಯವೋ ಅಷ್ಟು ಹಣ ಮಾಡಲು ಎಲ್ಲ ಕಸರತ್ತು ಮಾಡುತ್ತಾರೆ. ಬೇಕಾ ಬಿಟ್ಟಿ ಲೂಟಿ ಮಾಡಿದರೆ ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಹಾಕಿಕೊಳ್ಳುವ ಭಯ. ಮಂತ್ರಿಯಾಗಿದ್ದರೆ; ಶಾಸಕರು ಮತ್ತು ವಿರೋಧ ಪಕ್ಷದವರನ್ನು ಸಂಭಾಳಿಸುತ್ತಲೇ ಚುನಾವಣೆಯಲ್ಲಿ ಕಳೆದುಕೊಂಡಿದ್ದನ್ನು ಸಂಪಾದಿಸಬೇಕು. ಕಾರ್ಯಕರ್ತರು ಶಾಸಕ, ಸಂಸದ, ಮಂತ್ರಿಯನ್ನೇ ಅವಲಂಬಿಸಿರುತ್ತಾರೆ. ಬಯಲು ಸೀಮೆ ಕಾರ್ಯಕರ್ತರಿಗೆ ಕೃಷಿ ಆದಾಯವೇ ಆಸರೆ. ಶಾಸಕ-ಮಂತ್ರಿಯ ಅನುಯಾಯಿಯಾಗಿರಬೇಕೆಂದರೆ ಒಂದು ಕಾರು, ಡ್ರೈವರ್, ಒಳ್ಳೆಯ ಗುಣಮಟ್ಟದ ಮೊಬೈಲ್, ಮಕ್ಕಳಿಗೆ ಕಾನ್ವೆಂಟ್ ಸ್ಕೂಲ್, ಅದರ ಖರ್ಚು ವೆಚ್ಚ ಕೃಷಿ ಆದಾಯವೊಂದರಲ್ಲೇ ಭರಿಸಲು ಸಾಧ್ಯವಾಗುವುದಿಲ್ಲ. ಸಣ್ಣಪುಟ್ಟ ಕಾಮಗಾರಿಗಳನ್ನು ಮಾಡಿಸಿ ಅದರಲ್ಲೇ ಹಣ ಮಾಡಬೇಕು. ಬೆಂಗಳೂರು, ಮೈಸೂರು ಮತ್ತು ದೊಡ್ಡ ಶಹರದಲ್ಲಾದರೆ ರಿಯಲ್ ಎಸ್ಟೇಟ್, ಶಾಲಾ-ಕಾಲೇಜು ಮತ್ತು ಸಣ್ಣ ಪುಟ್ಟ ಕೈಗಾರಿಕೆ ಮಾಡಿ ಹಣ ಸಂಪಾದಿಸಬಹುದು. ನೀರಿನ ಅನುಕೂಲ ಇರುವಲ್ಲಿ ತೆಂಗು, ಅಡಿಕೆ, ಕಾಫಿ ಕೃಷಿಕರಾಗಿದ್ದರೆ ಶಾಸಕರು, ಮಂತ್ರಿಗಳ ಮೇಲೆ ಹೆಚ್ಚು ಅವಲಂಬನೆಯಾಗುವ ಅನಿವಾರ್ಯತೆ ಇರುವುದಿಲ್ಲ.

ಹಳೆ ಮೈಸೂರು, ಮಲೆನಾಡು, ಕರಾವಳಿ ಭಾಗಗಳ ಶಾಸಕರು, ಸಂಸದರು ಮತ್ತು ಮಂತ್ರಿಗಳ ಮೇಲೆ ಹೆಚ್ಚು ಆರ್ಥಿಕ ಹೊರೆ ಇರುವುದಿಲ್ಲ. ಅವರ ಅನುಯಾಯಿಗಳೂ ಹಣವಂತರೇ ಆಗಿರುವುದರಿಂದ ಆಯಾ ಮತಕ್ಷೇತ್ರಗಳ ಅಭಿವೃದ್ಧಿ ಕಾಮಗಾರಿಗಳಲ್ಲಿ ಒಂದು ಮಟ್ಟದ ಗುಣಮಟ್ಟ ಕಾಪಾಡಿಕೊಳ್ಳಬಹುದು. ಆದರೆ ಇಂತಹ ಭಾಗದಲ್ಲಿ ಚುನಾವಣೆ ಗೆಲ್ಲಲು ಭಾರೀ ಪೈಪೋಟಿ ಇರುತ್ತದೆ. ಇಲ್ಲಿ ಎಲ್ಲರೂ ಸ್ಥಿತಿವಂತರು ಆಗಿರುವುದರಿಂದ ಚುನಾವಣೆಯಲ್ಲಿ ಪೈಪೋಟಿಯ ಮೇಲೆ ಹಣ ಖರ್ಚು ಮಾಡುತ್ತಾರೆ. ಬೀದರ್, ಕಲಬುರಗಿ ಕಡೆ ಒಂದು ವಿಧಾನಸಭೆಯ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ಉತ್ತಮ ಜನ ಸಂಪರ್ಕ ಹೊಂದಿಯೂ ಗೆಲುವು ಸಾಧಿಸಲು ಹತ್ತರಿಂದ ಹದಿನೈದು ಕೋಟಿ ಹಣ ಬೇಕಾಗುತ್ತದೆ. ಆದರೆ ಅದೇ ಬೆಂಗಳೂರಿನಲ್ಲಿ ನೂರು ಕೋಟಿ ಇಲ್ಲದೆ ಶಾಸಕ, ಸಂಸದನಾಗಲು ಸಾಧ್ಯವಾಗುವುದಿಲ್ಲ. ಗ್ರಾಮ ಪಂಚಾಯತ್ ಸದಸ್ಯ ಚುನಾವಣೆಯಿಂದ ಹಿಡಿದು ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭಾ ಚುನಾವಣೆಯಲ್ಲಿ ಮಾಡುವ ಖರ್ಚು ವೆಚ್ಚವನ್ನು ಮರಳಿ ಪಡೆಯಲು ಸರಕಾರ ರೂಪಿಸುವ ಅಭಿವೃದ್ಧಿ ಯೋಜನೆಗಳ ಮೇಲೆಯೇ ಅವಲಂಬನೆಯಾಗುವುದು ಅನಿವಾರ್ಯವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಆಡಳಿತ ವಿರೋಧಿ ಅಲೆ ತಡೆಯಲು ಮತ್ತು ತಂತ್ರಗಾರಿಕೆ ರೂಪಿಸಲು ಪ್ರಶಾಂತ್ ಕಿಶೋರ್‌ರಂತಹ ಜಾಣರ ತಂಡವನ್ನು ಪಕ್ಷಗಳು ಹಣ ನೀಡಿಯೇ ನಿಭಾಯಿಸಬೇಕು. ಅದಕ್ಕೆಲ್ಲ ಹಣ ಎಲ್ಲಿಂದ ಬರುತ್ತದೆ? ಸರಕಾರಿ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳು, ಶಾಸಕರ ಅನುದಾನಗಳಿಗೆ ಕನ್ನ ಹಾಕಲೇಬೇಕಾಗುತ್ತದೆ. ನಾಯಿಕೊಡೆಗಳಂತೆ ತಲೆಎತ್ತಿದ ನ್ಯೂಸ್ ಚಾನೆಲ್‌ಗಳು ಈ ವಿಷವರ್ತುಲದ ಭಾಗವಾಗಿವೆ.

ಜನಪ್ರತಿನಿಧಿ ಯಾರೇ ಆಗಿರಲಿ: ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಬಿಬಿಎಂಪಿ ಸದಸ್ಯ, ಶಾಸಕ, ಸಂಸದ, ಮಂತ್ರಿಗಳು ಸರಕಾರಿ ಅಭಿವೃದ್ಧಿ ಯೋಜನೆಗಳಲ್ಲಿ ಅಕ್ರಮವಾಗಿ ಹಣ ಮಾಡುವುದು ಸರಳ ಸಂಗತಿಯಲ್ಲ. ಅಧಿಕಾರಿಗಳು, ಗುತ್ತಿಗೆದಾರರು, ಮಾಧ್ಯಮ, ಆರ್‌ಟಿಐ ಕಾಯ್ದೆ, ಲೋಕಾಯುಕ್ತ ಸಂಸ್ಥೆ-ಅಂತಿಮವಾಗಿ ಜನತೆಯ ನಿರೀಕ್ಷೆಗಳು. ಹಣ ಮಾಡುವ ಒತ್ತಡದಲ್ಲಿ ಇಡೀ ಸರಕಾರಿ ವ್ಯವಸ್ಥೆಯೇ ಸಿಲುಕಿದೆ. ಯಾರಿಗೂ ನೆಮ್ಮದಿ ಎಂಬುದಿಲ್ಲ. ಚುನಾವಣೆಯ ಖರ್ಚು-ವೆಚ್ಚ, ಗ್ರಾಹಕ ಸಂಸ್ಕೃತಿ ಮೇಲಿನ ಕಠಿಣ ನಿಯಂತ್ರಣ ಸಾಧ್ಯವಾದಾಗ ಮಾತ್ರ ಭ್ರಷ್ಟಾಚಾರರಹಿತ ವ್ಯವಸ್ಥೆ ತನ್ನಿಂದ ತಾನೇ ನಿರ್ಮಾಣವಾಗುತ್ತದೆ. ಹತ್ತು ವರ್ಷ ಆಡಳಿತ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒಂದೆಡೆ ಕಾರ್ಪೊರೇಟ್ ಭ್ರಷ್ಟಾಚಾರವನ್ನು ಪೋಷಿಸುತ್ತಾ, ಇನ್ನೊಂದೆಡೆ ಚುನಾವಣೆ ಭ್ರಷ್ಟಾಚಾರಕ್ಕೆ ಜೋಗುಳ ಹಾಡುತ್ತಾ ‘‘ಮೈ ನಾ ಖಾವುಂಗಾ ಔರ್ ಖಾನೆ ನಹೀ ದೂಂಗಾ’’ ಎಂದು ಭಾಷಣ ಮಾಡುತ್ತಿದ್ದರೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಒತ್ತಟ್ಟಿಗಿರಲಿ, ಅದನ್ನು ನಿಯಂತ್ರಿಸುವುದು ಅಸಾಧ್ಯವಾಗುತ್ತದೆ. ಎಲ್ಲ ಪಕ್ಷದ ನಾಯಕರು ಈ ಭ್ರಷ್ಟಾಚಾರವೆಂಬ ಸುಳಿಯಿಂದ ಹೊರ ಬರಬೇಕೆಂದರೆ ಚುನಾವಣಾ ಖರ್ಚು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಬೇಕು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಡಾ. ರಾಜಶೇಖರ ಹತಗುಂದಿ

contributor

Similar News