ಕಲಬುರಗಿ | ಜ.13ರಂದು ಆಳಂದ ತಾಲ್ಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನ

Update: 2024-12-12 13:59 GMT

ಕಲಬುರಗಿ : ಆಳಂದ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲ್ಲೂಕಿನ ಗಡಿಗ್ರಾಮ ಹಿರೋಳಿಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಹಣಮಂತ ಶೇರಿ ಖಜೂರಿ ತಿಳಿಸಿದ್ದಾರೆ.

ಮಂಗಳವಾರ ಆಳಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಆಳಂದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಚರ್ಚಿಸಿ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.

ಇಲ್ಲಿಯವರಗೆ ಜರುಗಿದ ಹಿಂದಿನ 11 ಸಮ್ಮೇಳನಗಳು ಯಶಸ್ವಿಯಾಗಿ ಜರುಗಿವೆ, ಅವುಗಳಂತೆ ಈ ಸಮ್ಮೇಳನವು ಯಶಸ್ವಿಯಾಗಿ ಜರುಗಲು ಎಲ್ಲ ತಯಾರಿ ಮಾಡಿಕೊಳ್ಳಲಾಗುವುದು. ಸಮ್ಮೇಳನದ ಯಶಸ್ಸಿಗೆ ಎಲ್ಲರ ಸಹಕಾರ ಕೋರಲು ನಿರ್ಧರಿಸಲಾಯಿತು.

ಕಳೆದ ವರ್ಷ ಬರಗಾಲ ಘೋಷಣೆಯಾಗಿದ್ದರಿಂದ ಸಮ್ಮೇಳನ ಹಮ್ಮಿಕೊಂಡಿರಲಿಲ್ಲ. ಈ ವರ್ಷ ಅಖಿಲ ಭಾರತ ಸಮ್ಮೇಳನವೂ ಜರುಗುತ್ತಿರುವುದರಿಂದ ವಿಶೇಷವಾಗಿ ಆಳಂದ ತಾಲ್ಲೂಕಿನ ಗಡಿಗ್ರಾಮ ಹಿರೋಳಿಯಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತಿದೆ. ತಾಲ್ಲೂಕಿನ ಕನ್ನಡ ಪ್ರೇಮಿಗಳು ಸಮ್ಮೇಳನದಲ್ಲಿ ಭಾಗವಹಿಸುವುದರ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಕಾರ್ಯಕಾರಿ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.

ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಧರ್ಮಣ್ಣ ಧನ್ನಿ ಆಯ್ಕೆಯಾಗಿದ್ದಾರೆ. ಧರ್ಮಣ್ಣ ಧನ್ನಿ ಅವರು ಬರೆದ ಅನೇಕ ಭಾಷಣ, ಕಾವ್ಯ ವಾಚನ, ರೂಪಕಗಳು ಕಲಬುರಗಿ ಆಕಾಶವಾಣಿಯಿಂದ ಪ್ರಸಾರವಾಗಿವೆ. ಈ ಎಲ್ಲಾ ಸಾಹಿತ್ಯದ ಪ್ರಕಾರಗಳ ರಚನೆಗೆ ಮನೆಯ ಪರಿಸರವೇ ಪ್ರಭಾವ. ಮೌನ ಮಾತಾಡಿದಾಗ, ಒಡಲ ಬ್ಯಾನಿ, ನೆನಪಿನ ಅಂಗಳದಲ್ಲಿ ಹಾಗೂ ಚುಟುಕು ಕವನ ಸಂಕಲನಗಳು ಸೇರಿ ನಾಲ್ಕು ಸಂಪಾದಿತ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ನೆಲ ಜಲ ಭಾಷೆ ಸಂಸ್ಕೃತಿಗಳನ್ನು ಪ್ರೀತಿಸುವ ಕವಿ ಹೃದಯ ಧನ್ನಿ ಅವರದು. ಅನೇಕ ಸಾಹಿತ್ಯಕ ಕಾರ್ಯಕ್ರಮಗಳನ್ನು ರೂಪಿಸಿ ನೆರವೇರಿಸಿದ್ದಾರೆ. ಸಾಕ್ಷರತಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ತರುವಲ್ಲಿ ಅವರ ಪಾತ್ರ ತುಂಬಾ ಹಿರಿದು. ಸಾಕ್ಷರತಾ ಕಲಿಕಾ ಕೇಂದ್ರಗಳನ್ನು ವ್ಯವಸ್ಥಿತವಾಗಿ ನಡೆಸಿ ರಾಜ್ಯ ಮಟ್ಟಕ್ಕೆ ಪರಿಚಯಿಸಿದ ಕೀರ್ತಿ ಧನ್ನಿ ಅವರಿಗೆ ಸಲ್ಲುತ್ತದೆ.

ಕೃತಿಗಳು ಮೌನ ಮಾತಾಡಿದಾಗ (ಕವನ ಸಂಕಲನ), ಒಡಲ ಬ್ಯಾನಿ (ಕವನ ಸಂಕಲನ), ನೆನಪಿನ ಅಲೆಯಲ್ಲಿ (ಹೈಕು), ಊರಾಚೆ (ಕಥಾ ಸಂಕಲನ) ಮುದ್ರಣದಲ್ಲಿದೆ, ಚುಟುಕು (ಸಂಕಲನ), ಚುಟುಕು (ಸಂಕಲನ). ಸಂಕಥನ, ಕನ್ನಡ ಸಾರಥಿ, ಕಹಳೆ, ವಿಜಯೀಭವ, ಮಹಿಳಾ ಸಾಹಿತಿಗಳು(ಮುದ್ರಣದಲ್ಲಿ) ಸಂಪಾದಿತ ಕೃತಿಗಳಾಗಿವೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News