ಮೇಲ್ಜಾತಿಯವರಿಂದ ಬಹಿಷ್ಕಾರ: ಕ್ರಮ ಕೈಗೊಳ್ಳದಿದ್ದರೆ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ನೀಡಿದ ಅಂಬರೀಶ ಮಲ್ಲೇಶಿ

ಅಂಬರೀಶ ಮಲ್ಲೇಶಿ
ಬೀದರ್ : ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಖಾನಾಪುರ್ ಗ್ರಾಮದಲ್ಲಿ ಮೇಲ್ಜಾತಿ ವರ್ಗದ ಜನ ಎಸ್.ಟಿ. ಗೊಂಡ, ಕುರುಬ ಸಮುದಾಯದ ಜನರಿಗೆ ಊರಿನಿಂದ ಬಹಿಷ್ಕಾರ ಹಾಕಿದ್ದು ಅತ್ಯಂತ ಖಂಡನೀಯವಾಗಿದೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇದರತ್ತ ಗಮನಹರಿಸದಿದ್ದಲ್ಲಿ ಮಾ.17 ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಗೊಂಡ ಸಮಾಜದ ಒಕ್ಕೂಟದ ವತಿಯಿಂದ ಅಂಬರೀಶ ಮಲ್ಲೇಶಿ ಅವರು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.
ಖಾನಾಪುರ್ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ನಾಮ ಫಲಕದಲ್ಲಿ ಭಾರತ ರತ್ನ ಡಾ. ಅಂಬೇಡ್ಕರ್ ಅವರ ಭಾವ ಚಿತ್ರ ಹಾಕಿದಕ್ಕೆ ಮೇಲ್ಜಾತಿ ವರ್ಗದವರು ಎಸ್.ಟಿ.ಗೊಂಡ, ಕುರುಬ ಸಮುದಾಯದ ಜನರಿಗೆ ಊರಿನಿಂದ ಬಹಿಷ್ಕಾರ ಹಾಕಿದ್ದಾರೆ. ಇದು ಅತ್ಯಂತ ಖಂಡನೀಯವಾಗಿದೆ. ನಮ್ಮ ದೇಶ ಸ್ವತಂತ್ರ‍್ಯವಾಗಿ ಇಷ್ಟು ವರ್ಷಗಳು ಕಳೆದರೂ ಇಲ್ಲಿ ಇನ್ನು ಅಸ್ಪೃಶ್ಯತೆ ಜೀವಂತವಾಗಿರುವುದು ದುಃಖಕರ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆ ಗ್ರಾಮದಲ್ಲಿನ ಗೊಂಡ,ಕುರುಬ ಸಮಾಜದ ಜನರಿಗೆ ದಿನಾಲು ಬೇಕಾಗುವ ಅಗತ್ಯ ವಸ್ತುಗಳು ಮಾರಾಟ ಮಾಡದಂತೆ ತಡೆಯಲಾಗಿದೆ. ಕಿರಾಣಿ, ಹಾಲು, ಹಣ್ಣು ಹೀಗೆ ಅಗತ್ಯ ವಸ್ತುಗಳ ಅಂಗಡಿಗಳಲ್ಲಿ ಇವರಿಗೆ ವಸ್ತುಗಳು ನೀಡಬಾರದು. ಹಾಗೆಯೇ ಇವರಿಗೆ ಕಟಿಂಗ್ ಸಲೂನ್ ಅಂಗಡಿಯವರು ಕಟಿಂಗ್ ಮಾಡಬಾರದು. ಒಂದು ವೇಳೆ ಈ ಸಮುದಾಯದ ಜನರಿಗೆ ಅಂಗಡಿಯಿಂದ ವಸ್ತುಗಳು ನೀಡಿದರೆ ಆ ಅಂಗಡಿ ಮಾಲೀಕರಿಗೆ 10 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಆ ಸಮುದಾಯದ ಜನರಿಗೆ ಊರಿನಿಂದ ಬಹಿಷ್ಕಾರ ಹಾಕಲಾಗಿದೆ. ಹಾಗಾಗಿ ಗೊಂಡ, ಕುರುಬ ಸಮುದಾಯಕ್ಕೆ ನ್ಯಾಯ ಒದಗಿಸುವುದಲ್ಲದೇ, ಬಹಿಷ್ಕಾರ ಹಾಕಿರುವ ಮೇಲ್ಜಾತಿ ವರ್ಗದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.