ಕಲಬುರಗಿ: ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಸೂಚನೆ

Update: 2025-03-15 20:23 IST
ಕಲಬುರಗಿ: ರಸ್ತೆ ಸುರಕ್ಷತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಸೂಚನೆ
  • whatsapp icon

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಪ್ರಮುಖವಾದ ರಸ್ತೆಗಳು ಹಾಗೂ ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ ಸಂಬಂಧಿತ ಅಧಿಕಾರಿಗಳು ರಸ್ತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ರಸ್ತೆ ಸುರಕ್ಷತಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಲಾಲಗಿರಿ ಕ್ರಾಸ್‍ನಲ್ಲಿ ಮೊದಲನೆ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನುಳಿದಂತೆ ಎರಡನೇ ಹಂತದ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕೆಂದು ತಿಳಿಸಿದರು.

ಯುಡಿಆರ್ ಫಂಡ್ ಮತ್ತು ಇತರೆ ಅನುದಾನವನ್ನು ಬಳಸಿ ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಬ್ಯಾರಿಕೇಡ್ ಮತ್ತು ಟ್ರಾಫಿಕ್ ಸಿಗ್ನಲ್‍ಗಳನ್ನು ಅಳವಡಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶಹಾಬಾದ ಪಟ್ಟಣ ವ್ಯಾಪ್ತಿಯಲ್ಲಿ ಬರುವ ಎನ್.ಎಚ್.150 ಹಾಗೂ ಅಫಜಲಪೂರ ಪಿ.ಎಸ್. ವ್ಯಾಪ್ತಿಯಲ್ಲಿ ಎನ್.ಎಚ್. 150ಇ ರಲ್ಲಿ ಬರುವ ಬ್ಲ್ಯಾಕ್ ಸ್ಪಾಟ್‍ಗಳು ಸುಧಾರಣೆಯ ಪ್ರಗತಿಯಲ್ಲಿರುತ್ತದೆಂದು ಕಾರ್ಯನಿರ್ವಾಹಕ ಅಭಿಯಂತರರು ರಾಷ್ಟ್ರೀಯ ಹೆದ್ದಾರಿ ವಿಭಾಗ ಕಲಬುರಗಿ ರವರು ವರದಿ ಸಲ್ಲಿಸಿರುತ್ತಾರೆ ಅಧಿಕಾರಿ ಗಮನಕ್ಕೆ ತಂದರು.

ಆಟೋ ಸಂಘಟನೆಗಳಿಂದ ಎಲೆಕ್ಟ್ರಿಕ್ ಆಟೋಗಳ ಖರೀದಿಸಲು ಬ್ಯಾಂಕ್‍ಗಳಲ್ಲಿ ಸುಲಭವಾಗಿ ಲೋನ್ ಲಭ್ಯವಿರುವ ಕಾರಣದಿಂದ ಅನೇಕರು ಎಲೆಕ್ಟ್ರಿಕ್ ಆಟೋಗಳನ್ನು ಖರೀದಿಸುತ್ತಿದ್ದು, ಹೆಚ್ಚಾಗುತ್ತಿರುವ ಎಲೆಕ್ಟ್ರಿಕ್ ವಾಹನಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಸ್ಥಳವನ್ನು ಗುರುತಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.

ಬ್ಲಾಕ್ ಸ್ಪಾಟ್ ಸ್ಥಳಗಳಿಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ, ರಸ್ತೆ ಹೆದ್ದಾರಿ, ಕೆ.ಆರ್.ಐ.ಡಿ.ಎಲ್.,ಕೆ.ಆರ್.ಡಿ.ಸಿ.ಎಲ್. ಹಾಗೂ ಇತರೆ ರಸ್ತೆ ನಿರ್ಮಾಣ ಮಾಡುವ ಸಂಬಂಧಪಟ್ಟ ಕಾರ್ಯನಿರ್ವಾಹಕ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ತುರ್ತಾಗಿ ಬಾಕಿ ಉಳಿದಿರುವ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಸೂಚಿಸಿದರು.

ಜಿಲ್ಲೆಯಲ್ಲಿ 64 ಆಟೋಸ್ಟ್ಯಾಂಡ್‍ಗಳಿದ್ದು, ಅಲ್ಲದೆ ಹೆಚ್ಚುವರಿಯಾಗಿ ಇನ್ನು 72 ಆಟೋಸ್ಟ್ಯಾಂಡ್‍ ಗಳನ್ನು ಸ್ಥಾಪಿಸಬೇಕೆಂದು ಆಟೋ ಸಂಘಗಳ ಬೇಡಿಕೆಯಿದೆ. ಹಾಗಾಗಿ ತ್ವರಿತವಾಗಿ ಮಹಾನಗರ ಪಾಲಿಕೆಯಿಂದ 10 ಆಟೋ ಸ್ಟ್ಯಾಂಡಗಳನ್ನು ಸ್ಥಾಪಿಸಬೇಕೆಂದು ಸೂ ಹಣೆ ಕೊಟ್ಟರು.

ಜಿಲ್ಲೆಯಲ್ಲಿ ಸ್ಥಾಪಿಸುವ ಆಟೋ ಸ್ಟ್ಯಾಂಡ್‍ಗಳಿಗೆ ಕಾಮಾನುಗಳು ಬ್ಯಾರಿಕೇಡ್‍ಗಳನ್ನು ಅಳವಡಿಸಿ ಅಪಘಾತ ಸಂಭವಿಸುವುದನ್ನು ತಡೆಗಟ್ಟಲು ಲೈಟಿಂಗ್ ಮತ್ತು ಟ್ರಾಫಿಕ್ ಸಿಗ್ನಲ್ ಮತ್ತು ಬೀದಿ ದೀಪಗಳನ್ನು ಆಳವಡಿಸಿ ಯಾವುದೇ ರಸ್ತೆ ಅಪಘಾತ ಮತ್ತು ಟ್ರಾಫಿಕ್ ಸಮಸ್ಯೆಯಾಗದಂತೆ ಕ್ರಮವಹಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಬೈಕ್ ರ್ಯಾಲಿ ಮೂಲಕ ಟ್ರಾಫಿಕ್ ಸಮಸ್ಯೆ ಕುರಿತು ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.

ನಗರ ಪೋಲಿಸ್ ಆಯುಕ್ತ ಶರಣಪ್ಪ ಎಸ್.ಡಿ. ಜಿಲ್ಲೆಯಲ್ಲಿ ಏರಪೋರ್ಟ ಹೋಗುವ ದಾರಿ ಮತ್ತು ರಿಂಗ್‍ರೋಡನಲ್ಲಿ ಹೆಚ್ಚಿನ ಟ್ರಾಫಿಕ್ ಸಮಸ್ಯೆಯಿದ್ದು, ಸಾಯಂಕಾಲ 6 ರಿಂದ ರಾತ್ರಿ 9 ರವರೆಗೆ ಲೋಡೆಡ್ ವಾಹನಗಳಿಗೆ ಮಾರ್ಗ ಬದಲಾವಣೆಯನ್ನು ಮಾಡಿ ಟ್ರಾಫಿಕ್ ಸಮಸ್ಯೆಗಳನ್ನು ನಿಯಂತ್ರಿಸಬೇಕು, ರಸ್ತೆ ಸುರಕ್ಷತಾ ಕ್ರಮಗಳನ್ನು ಉಲ್ಲಂಘಿಸುವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಧಿಕಾರಿ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆಯ ಆಯುಕ್ತ ಅವಿನಾಶ ಶಿಂಧೆ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News