ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಠಾಣೆ ಸ್ಥಾಪಿಸಿ: ಶಶೀಲ್ ಜಿ ನಮೋಶಿ

Update: 2025-03-14 17:56 IST
ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಠಾಣೆ ಸ್ಥಾಪಿಸಿ: ಶಶೀಲ್ ಜಿ ನಮೋಶಿ
  • whatsapp icon

ಕಲಬುರಗಿ: ನಗರವು ದಿನೇ ದಿನೇ ಅತೀ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದ್ದು, ಇಲ್ಲಿ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳ ಕಚೇರಿಗಳು ಮತ್ತು ಇತರೆ ಇಲಾಖೆಯ ವಲಯ ಮತ್ತು ವಿಭಾಗಿಯ ಕಚೇರಿಗಳು ಹೊಂದಿವೆ, ಅದರಂತೆಯೇ ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಠಾಣೆ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಒತ್ತಾಯಿಸಿದ್ದಾರೆ.

ವಿಧಾನಮಂಡಲ ಅಧಿವೇಶನದ ಶೂನ್ಯ ವೇಳೆಯಲ್ಲಿ ಈ ಬೇಡಿಕೆ ಪ್ರಸ್ತಾಪಿಸಿದ ನಮೋಶಿ ಅವರು, ಕಲಬುರಗಿ ನಗರವು ಸೂಕ್ಷ್ಮ ನಗರವಾಗಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಲಬುರಗಿ ನಗರದಲ್ಲಿ ಪೊಲೀಸ್ ಕಮೀಷನರ್ ಕಚೇರಿಯೂ ಆರಂಭವಾಗಿರುತ್ತದೆ. ಕಲಬುರಗಿ ರೈಲ್ವೆ ನಿಲ್ದಾಣದಿಂದ ಪ್ರತಿನಿತ್ಯ ಸುಮಾರು 15 ರಿಂದ 20 ಸಾವಿರ ಜನರು ರೈಲು ಮೂಲಕ ಪ್ರಯಾಣ ಮಾಡುತ್ತಾರೆ. ಕಲಬುರಗಿ ರೈಲ್ವೆ ನಿಲ್ದಾಣದಿಂದ ಸುಮಾರು 75-80 ಎಕ್ಸಪ್ರೆಸ್ ರೈಲುಗಳು (ಗೂಡ್ಸ್ ರೈಲುಗಳನ್ನು ಹೊರತುಪಡಿಸಿ) ಓಡಾಡುತ್ತವೆ. ಕಲಬುರಗಿ ನಗರದಿಂದ ಪ್ರತಿದಿನ ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಇತರೆ ಗಣ್ಯ ವ್ಯಕ್ತಿಗಳು ರೈಲುಗಳ ಮೂಲಕ ಪ್ರಯಾಣ ಮಾಡುತ್ತಾರೆ. ಆದರೆ ಕಲಬುರಗಿ ರೈಲ್ವೆ ನಿಲ್ದಾಣ ವ್ಯಾಪ್ತಿಯಲ್ಲಿ ಸಂಭವಿಸುವ ಅಪರಾಧ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸ್ಥಳೀಯ ರೈಲ್ವೆ ಪೊಲೀಸ್ ಠಾಣೆಗಳಿಗೆ ದೂರು ದಾಖಲು ಮಾಡಲು ಅವಕಾಶವಿಲ್ಲ. ಸುಮಾರು 20 ವರ್ಷಗಳಿಂದ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಠಾಣೆಯನ್ನು ಸ್ಥಾಪನೆ ಮಾಡುವ ಕುರಿತು ರಾಜ್ಯ ಸರ್ಕಾರಕ್ಕೆ ವಿನಂತಿಸಿಕೊಂಡಿದ್ದರೂ ಕೂಡ ಇಲ್ಲಿಯವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕುರಕುಂಟಾ (ಆಂಧ್ರ ಗಡಿಯವರೆಗೆ) ರೈಲ್ವೆ ನಿಲ್ದಾಣದಿಂದ ಕುಲಾಲಿ ರೈಲ್ವೆ ನಿಲ್ದಾಣದವರೆಗೆ (ಮಹಾರಾಷ್ಟ್ರ ರಾಜ್ಯ) ಮತ್ತು ಹುಮ್ನಾಬಾದ ರೈಲ್ವೆ ನಿಲ್ದಾಣದ ವರೆಗೆ ಈ ಮಾರ್ಗದಲ್ಲಿ ಸಂಚರಿಸುವ ರೈಲು ಗಾಡಿಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಯಾವುದೇ ಅಪರಾಧ ಪ್ರಕರಣ ವರದಿಯಾದರೂ ಕೂಡ ವಾಡಿ ರೈಲ್ವೆ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುವ ಅನಿವಾರ್ಯತೆ ಇರುತ್ತದೆ. ಪ್ರಸ್ತುತ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಉಪ ಠಾಣೆ ಇರುತ್ತದೆ. ಈ ಉಪ ಠಾಣೆಯು ವಾಡಿ ರೈಲ್ವೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುತ್ತದೆ. ಪ್ರತಿ ವರ್ಷ ವಾಡಿ ರೈಲ್ವೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸುಮಾರು 250-300 ಅಪರಾಧ ಪ್ರಕರಣಗಳು 150-200 ಯು.ಡಿ. ಪ್ರಕರಣಗಳು ವರದಿಯಾಗುತ್ತವೆ ಎಂದು ವಿವರಿಸಿದರು.

ವಾಡಿಯಲ್ಲಿ ವರದಿಯಾಗುವ ಇಷ್ಟು ಪ್ರಕರಣಗಳಲ್ಲಿ ಸುಮಾರು 60% ಪ್ರಕರಣಗಳು ಕಲಬುರಗಿ ರೈಲ್ವೆ ಉಪ ಠಾಣೆಯ ವ್ಯಾಪ್ತಿಯಲ್ಲಿಯೇ ಘಟನೆ ಜರುಗಿರುತ್ತವೆ. ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಇಲಾಖೆಯವರು ರೈಲ್ವೆ ಪೊಲೀಸ್ ಠಾಣೆಗೆ ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿಸಿಕೊಟ್ಟಿರುತ್ತಾರೆ. ಆದರೆ ಇಲ್ಲಿಯವರೆಗೂ ಕೂಡ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಠಾಣೆ ಆರಂಭವಾಗಿರುವುದಿಲ್ಲ. ಕಲಬುರಗಿ ರೈಲ್ವೆ ಉಪ ಠಾಣೆಯಲ್ಲಿ ಕೇವಲ 6 ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿಯವರು ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಮತ್ತು ಉಪ ಠಾಣೆಯ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ಹಾಗಾಗಿ ಪೊಲೀಸ್ ಠಾಣೆ ಸ್ಥಾಪಿಸಬೇಕೆಂದು ಆಗ್ರಹಿಸಿದರು.

ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಠಾಣೆಯನ್ನು ಸ್ಥಾಪನೆ ಮಾಡುವ ಕುರಿತು ಸಲ್ಲಿಸಿರುವ ಪ್ರಸ್ಥಾವನೆಯು ಡಿ.ಜಿ. ಮತ್ತು ಐ.ಜಿ, ಬೆಂಗಳೂರು ಇವರ ಕಚೇರಿಯಲ್ಲಿ ಇರುತ್ತದೆ. ಆದ್ದರಿಂದ ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಈ ಕೂಡಲೇ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸ್ ಠಾಣೆಯನ್ನು ಸ್ಥಾಪನೆ ಮಾಡಿ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾದ ಕಲಬುರಗಿ ನಗರದ ಸಾರ್ವಜನಿಕರಿಗೆ ಅನುಕೂಲ ಕೊಡಬೇಕೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News