ಕಲಬುರಗಿ | ಪ್ರತಿಭಟನಾನಿರತ ವ್ಯಕ್ತಿಯಿಂದ ಪುರಸಭೆ ಸಿಬ್ಬಂದಿ ಮೇಲೆ ಹಲ್ಲೆ ಆರೋಪ

ಕಲಬುರಗಿ : ಜೇವರ್ಗಿ ಪಟ್ಟಣ ಪುರಸಭೆಯ ಸಿಬ್ಬಂದಿ ರಾಜಶೇಖರಯ್ಯ ಹಿರೇಮಠ ಮೇಲೆ ಪೌರಕಾರ್ಮಿಕರ ಪರವಾಗಿ ಹೋರಾಟ ನಡೆಸುತ್ತಿರುವ ಮಹೇಶ್ ರಾಠೋಡ್ ಎಂಬಾತ ಹಲ್ಲೆ ಮಾಡಿದ್ದು, ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೆಲಸದಿಂದ ತೆಗೆದ ದಿನಗೂಲಿ ಪೌರಕಾರ್ಮಿಕರ ಮರು ನೇಮಕಾತಿಗಾಗಿ ಆಗ್ರಹಿಸಿ ಕಳೆದ 8 ದಿನಗಳಿಂದ ಪುರಸಭೆ ಮುಂದೆ ಮಹೇಶ ರಾಠೋಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಪುರಸಭೆ ಅಧಿಕಾರಿಗಳು ಗಮನಿಸುತ್ತಿಲ್ಲಎಂದು ಏಕಾಏಕಿ ಇಂದು ಮಹೇಶ ರಾಠೋಡ ಪುರಸಭೆ ಒಳಗೆ ಬಂದು ಕರ್ತವ್ಯ ನಿರತ ಹಿರಿಯ ಆರೋಗ್ಯ ನಿರೀಕ್ಷಕ ರಾಜಶೇಖರಯ್ಯ ಹಿರೇಮಠ ಅವರನ್ನು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೆ ಹೊರಗೆಳೆದೊಯ್ದು ಹಲ್ಲೆ ಮಾಡಿದ್ದಾರೆಂದು ಪುರಸಭೆ ನೌಕರರು ಆರೋಪ ಮಾಡಿದ್ದಾರೆ.
ರಾಜಶೇಖರಯ್ಯ ಅವರನ್ನು ಎಳೆದಾಡಿದ ದೃಶ್ಯ ಕಚೇರಿಯಲ್ಲಿನ ಸಿಸಿಟಿವಿಯಲ್ಲಿ ಸರೆಯಾಗಿದೆ. ಕೂಡಲೇ ಮಹೇಶ್ ರಾಥೋಡ್ ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಸಿಬ್ಬಂದಿ ಆಗ್ರಹಿಸಿದ್ದಾರೆ.
ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.