ವಾಡಿ ಪಟ್ಟಣದಲ್ಲಿ ಸರಕಾರಿ ಕಾಲೇಜು ಸ್ಥಾಪಿಸುವಂತೆ ಸಚಿವ ಪ್ರಿಯಾಂಕ್ ಖರ್ಗೆಗೆ ಪತ್ರಕರ್ತರ ಮನವಿ

ಕಲಬುರಗಿ : ವಾಡಿ ಪಟ್ಟಣದಲ್ಲಿ ಸರಕಾರಿ ಪದವಿ ಪೂರ್ವ ಹಾಗೂ ಪದವಿ ಮಹಾವಿದ್ಯಾಲಯ ಸ್ಥಾಪಿಸುವಂತೆ ಕೋರಿ ವಾಡಿಯ ಸ್ಥಳೀಯ ಪತ್ರಕರ್ತರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಗುರುವಾರ ಬೆಂಗಳೂರಿನ ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಭೇಟಿ ನೀಡಿದ ವಿವಿಧ ಮಾಧ್ಯಮಗಳ ವರದಿಗಾರರು, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಕಾಲೇಜು ಬೇಡಿಕೆ ಈಡೇರಿಕೆಗೆ ತಕ್ಷಣ ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.
ಒಟ್ಟು 13 ಪ್ರಾಥಮಿಕ ಶಾಲೆ ಮತ್ತು ರಾವೂರ, ಇಂಗಳಗಿ, ಲಾಡ್ಲಾಪುರ ಗ್ರಾಮಗಳು ಸೇರಿದಂತೆ ವಾಡಿ ನಗರದಲ್ಲಿ ಒಟ್ಟು 17 ಪ್ರೌಢ ಶಾಲೆಗಳಿವೆ. ಪ್ರತಿವರ್ಷ ಸುಮಾರು 600 ವಿದ್ಯಾರ್ಥಿಗಳು 10ನೇ ತರಗತಿ ಉತ್ತೀರ್ಣರಾಗುತ್ತಾರೆ. ಈ ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಸ್ಥಳೀಯವಾಗಿ ಸರ್ಕಾರಿ ಕಾಲೇಜು ಸೌಲಭ್ಯ ಇಲ್ಲ. ಪರಿಣಾಮ ಕಳೆದ ಆರು ದಶಕಗಳಿಂದ ಪ್ರೌಢ ಶಿಕ್ಷಣ ಮುಗಿಸಿದ ವಿದ್ಯಾರ್ಥಿಗಳು ದೂರದ ಕಲಬುರಗಿ, ಯಾದಗಿರಿ, ವಿಜಯಪುರ, ಹೈದರಾಬಾದ್, ಬೀದರ್, ರಾಯಚೂರು ಅಥವಾ ಬೆಂಗಳೂರು ನಗರಗಳ ಕಾಲೇಜುಗಳಿಗೆ ಪ್ರವೇಶ ಪಡೆಯಲು ದುಬಾರಿ ಬೆಲೆ ಪಾವತಿಸಿ ಕಷ್ಟಪಡುತ್ತಿದ್ದಾರೆ. ಬಡಕುಟುಂಬದ ವಿದ್ಯಾರ್ಥಿಗಳು ನಗರಗಳ ಖಾಸಗಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯಲು ಸಾಧ್ಯವಾಗದೆ ಶಿಕ್ಷಣ ಅಭ್ಯಾಸ ಕೈಬಿಡುತ್ತಿದ್ದಾರೆ. ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯವಂತೂ ಘನಘೋರವಾಗಿದೆ. 10ನೇ ತರಗತಿಗೆ ಶಿಕ್ಷಣ ಸ್ಥಗಿತಗೊಳಿಸುತ್ತಿದ್ದಾರೆ. ಇದು ಹೆಣ್ಣು ಮಕ್ಕಳ ಕಲಿಕಾ ಭವಿಷ್ಯಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆ ಎಂದು ಪತ್ರಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.
ಪುರಸಭೆ ಆಡಳಿತ ಕೇಂದ್ರ ಸ್ಥಾನವಾಗಿರುವ ವಾಡಿ ಪಟ್ಟಣದಲ್ಲಿ ಸರಕಾರಿ ಕಾಲೇಜು ಅತ್ಯಗತ್ಯವಾಗಿ ಬೇಕಿದೆ. ಕಟ್ಟಡ ನಿರ್ಮಾಣ ಮಾಡಲು ಅಗತ್ಯ ಭೂಮಿಯ ಸೌಲಭ್ಯವಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ದೊಡ್ಡ ಮಟ್ಟದಲ್ಲಿದೆ. ಹೀಗಾಗಿ ವಾಡಿ ಪಟ್ಟಣಕ್ಕೆ ಸರಕಾರಿ ಕಾಲೇಜು ಮಂಜೂರು ಮಾಡಿಸಬೇಕು ಎಂದು ಪತ್ರಕರ್ತರು ಸಚಿವರಲ್ಲಿ ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಿ ಪತ್ರಕರ್ತರಿಗೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ವಾಡಿ ಪಟ್ಟಣದಲ್ಲಿ ಸರಕಾರಿ ಕಾಲೇಜು ಸ್ಥಾಪನೆ ಮಾಡುವ ಅಗತ್ಯತೆಯಿದೆ. ಇದಕ್ಕಾಗಿ ನಾನೂ ಸಹ ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಕೂಡ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ಪತ್ರಕರ್ತರಾದ ಮಡಿವಾಳಪ್ಪ ಹೇರೂರ, ಸಿದ್ಧರಾಜು ಮಲಕಂಡಿ, ದಯಾನಂದ ಖಜೂರಿ, ರಾಯಣ್ಣ ಕಮರವಾಡಿ ಅವರು ನಿಯೋಗದಲ್ಲಿ ಇದ್ದರು.