ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಚೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಣೆ

ಕಲಬುರಗಿ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಲಬುರಗಿಯ ಕೇಂದ್ರ ಕಚೇರಿಯಲ್ಲಿ ಬುಧವಾರ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮಾತನಾಡಿ, ಮಹಿಳೆಯರು ಅಬಲೆಯಲ್ಲ ಅವರು ಸಭಲೆ. ಹೆಣ್ಣು ತ್ಯಾಗದ ಪ್ರತಿರೂಪ, ಸಹನಶೀಲಳು ಹಾಗೂ ಒಂದು ಕಟುಂಬದ ಸಂರಕ್ಷಣೆ ಸಾಮರ್ಥ್ಯವುಳ್ಳವಳು. ವಿದ್ಯೆಗೆ ಸರಸ್ವತಿ, ಸಂಪತ್ತಿಗೆ ಲಕ್ಷ್ಮಿ, ಶಿಸ್ತಿಗೆ ಪಾರ್ವತಿ ಮತ್ತು ಎಲ್ಲದಕ್ಕೂ ಮಿಗಿಲಾಗಿ ಜನ್ಮಕೊಟ್ಟವಳು ಎಂದು ಹೇಳಿದರು.
ಈಗಾಲಲೇ ಹಲವಾರು ಕ್ಷೇತ್ರಗಳಲ್ಲಿ ತಮ್ಮ ಕಾರ್ಯಕ್ಷಮತೆಯ ಮೂಲಕ ವಿನೂತನ ಸಾಧನೆಗಳನ್ನು ತೋರಿರುತ್ತಾರೆ. ಅಲ್ಲದೇ ಪ್ರತಿಯೊಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಮಹಿಳೆಯ ಪರಿಶ್ರಮ ಇರುತ್ತದೆ ಎಂದು ತಿಳಿಸಿದರು.
ಪ್ರಸ್ತುತ ವಾತವರಣದಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸಿದ್ದು, ಈ ಶಿಕ್ಷಣದಿಂದಲೇ ಮಹಿಳೆಯರು ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಎಲ್ಲಾ ಕ್ಷೇತ್ರಗಳಲ್ಲಿ ಆರ್ಥಿಕ, ರಾಜಕೀಯ, ಶಿಕ್ಷಣ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದರು.
ಡಾ.ಬಿ.ಆರ್.ಅಂಬೇಡ್ಕರರು ತಿಳಿಸಿದಂತೆ ಶಿಕ್ಷಣದಿಂದಲೇ ಸರ್ವತೋಮುಖದ ಅಭಿವೃದ್ಧಿ ಸಾಧ್ಯ ಆದ್ದರಿಂದ ಈ ನಿಟ್ಟಿನಲ್ಲಿ ಪ್ರತಿ ಮಹಿಳೆಯು ಶಿಕ್ಷಣ ಪಡೆಯುವುದು ಅತೀ ಮುಖ್ಯವಾಗಿದೆ ಎಂದು ತಿಳಿಸಿದರು.
ಸಮಾಜದಲ್ಲಿ ಅಂಗ ಸಮಾನತೆಯನ್ನು ಕಾಯ್ದುಕೊಳ್ಳುವುದು ಆರೋಗ್ಯಕರ ಬೆಳವಣಿಗೆ ಎಂದು ತಿಳಿಸಿದರು. ಅಲ್ಲದೇ ಮಹಿಳೆಯರು ನಿಗಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿರ್ವಾಹಕ ಮತ್ತು ಚಾಲಕ ಹುದ್ದೆಗೆ ಹೆಚ್ಚಿನ ಆಸಕ್ತಿ ವಹಿಸಿ ನೇಮಕಗೊಳ್ಳಲು ಸಲಹೆ ನೀಡಿದರು.
ಡಾ.ಅಶ್ವಿನಿಕುಮಾರಿ ಧನವಡಕರ್‌ರವರು ಮಾತನಾಡಿ, ಮಹಿಳೆಯರು ತಮ್ಮ ದೈನಂದಿನ ಕೆಲಸಕಾರ್ಯಗಳೊಂದಿಗೆ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ ಆರೋಗ್ಯವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದ್ದು, ಈ ವಿಷಯದಲ್ಲಿ ಅನುಸರಿಸಬೇಕಾದ ಅಮೂಲ್ಯ ಅಂಶಗಳ ಬಗ್ಗೆ ತಿಳಿಸಿದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಟಗೇರಾದ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಗುರು ರಾಜಶ್ರೀ ಮಾತನಾಡಿ, ಇಂದಿನ ಜಗತ್ತಿನಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ಮಹಿಳೆಯರು ಶಿಕ್ಷಣ ಕಡೆ ಹೆಚ್ಚಿನ ಗಮನ ಕೊಡುವಂತೆ ತಿಳಿಸಿದರು. ಅಲ್ಲದೇ “ ತೊಟ್ಟಿಲು ತೂಗಿದ ಕೈ ದೇಶವನ್ನೇ ಆಳಬಹುದೆಂದು" ಎಂಬುದನ್ನು ಮಹಿಳೆಯರು ಈಗಾಗಲೇ ಸಾಧಿಸಿ ತೋರಿರುತ್ತಾರೆ ಎಂದು ವಿವರಿಸಿದರು.
ಸದರಿ ಕಾರ್ಯಕ್ರಮದಲ್ಲಿ ನಿಗಮದ ಎಲ್ಲಾ ಇಲಾಖಾ ಮುಖ್ಯಸ್ಥರು ಹಾಗೂ ಇತರೇ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತಿರಿದ್ದರು.