ಕಲಬುರಗಿ | ವಿಜ್ಞಾನ ಕೇಂದ್ರದಲ್ಲಿ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ

ಕಲಬುರಗಿ : ಒಂದು ದೇಶಕ್ಕೆ ಸೈನ್ಯ ಎಷ್ಟು ಮುಖ್ಯವೋ, ಕುಟುಂಬಕ್ಕೂ ಕೂಡ ಮಹಿಳೆ ಅಷ್ಟೇ ಮುಖ್ಯ. ಎಲ್ಲಿ ಸಮಾನತೆ ಇರುತ್ತದೋ ಅಲ್ಲಿ ಅಭಿವೃದ್ಧಿ ಸಾಧ್ಯ ಎಂದು ಲೇಖಕ ಡಾ.ಶಿವರಂಜನ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಎಲ್ & ಟಿ ಫೈನಾನ್ಸ್, ಎಕ್ಸೆಸ್ ಲೈವಲೀಹೂಡ್ಸ್- ಡಿಜಿಟಲ್ ಸಖಿ ಯೋಜನೆ ಕಲಬುರಗಿ ಮತ್ತು ಬೀದರ್ ಇವುಗಳ ಸಹಯೋಗದಲ್ಲಿ ಕಲಬುರಗಿಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯವಾದ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
12ನೇ ಶತಮಾನದ ಶರಣರು ಮಹಿಳೆಯರಿಗೆ ಸಮಾನ ಸ್ಥಾನ ಮಾನ ನೀಡಿದರು ಮಾತ್ರವಲ್ಲ. ಮಹಿಳೆಯನ್ನು ಸಾಕ್ಷಾತ್ ಕಪಿಲ ಸಿದ್ಧ ಮಲ್ಲಿಕಾರ್ಜುನ, ಮನದ ಮುಂದಣ ಆಸೆಯೇ ಮಾಯೆ ಎಂದು ಕರೆದರು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಬ್ರಹ್ಮಪುರ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕಿ ಯಶೋಧಾ ಕಟಕೆ ಮಾತನಾಡಿ, ಹೊಟ್ಟೆ, ಬಟ್ಟೆಗೆ ಬಡತನವಿರಬಹುದು. ಆದರೆ ಸಾಧನೆಗೆ ಬಡತನವಿಲ್ಲ. ಮಹಿಳೆಯರ ಸಾಧನೆಗೆ ಪುರುಷರ ಬೆಂಬಲ, ಪ್ರೋತ್ಸಾಹ ಅಗತ್ಯವಾಗಿದ್ದು, ಮಹಿಳೆಯರು ಶಾಂತಿ, ವಿದ್ಯೆ, ಪ್ರೀತಿ, ಸಂಸ್ಕೃತಿ ಕಲಿಯಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪ್ರಾಧ್ಯಾಪಕಿ ಡಾ.ಶೈಲಜಾ ಕೊಪ್ಪರ ಮಾತನಾಡಿ, ಮಹಿಳೆಯರು ಸ್ವಾಭಿಮಾನ, ಸ್ವಾವಲಂಬನೆ ಜೊತೆಗೆ ಆರ್ಥಿಕ, ಸಾಮಾಜಿಕ ಮತ್ತು ವೈಚಾರಿಕ ಸಬಲೀಕರಣ ಆಗಬೇಕು ಎಂದರು.
ಪಿ.ಎಂ. ಎಫ್.ಎಂ. ಇ ಯೋಜನೆಯೆ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಂತೋಷ ಜವಳಿ ಮಾತನಾಡಿ, ಬ್ಯಾಂಕ್ ಹುಟ್ಟಿದ್ದು ಅಡುಗೆ ಮನೆಯಲ್ಲಿ. ಮಹಿಳೆಯರು ಆರ್ಥಿಕ ಶಿಸ್ತು ಅಳವಡಿಸಿಕೊಂಡರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಸಮುದಾಯ ಸಲಹಾ ಸಮಿತಿ ಹಾಗೂ ಡಿಜಿಟಲ್ ಸಖಿ ಯೋಜನೆಯ ಸದಸ್ಯೆ ವಿಜಯಲಕ್ಷ್ಮೀ ಶೀಲವಂತ ಅಧ್ಯಕ್ಷತೆ ವಹಿಸಿದ್ದರು. ಎಸ್.ಬಿ.ಐ ಲೀಡ್ ಬ್ಯಾಂಕ್ ಎಲ್.ಡಿ.ಎಂ ಸಂತೋಷಕುಮಾರ ಪಾಟೀಲ ಉದ್ಘಾಟಿಸಿದರು. ಯಶಸ್ವಿ ಉದ್ಯಮಿ ಕವಿತಾ ನಾಯ್ಡು, ವಿಜಯಲಕ್ಷ್ಮೀ ಮರಡಿ ವೇದಿಕೆಯಲ್ಲಿದ್ದರು. ಡಿಸಿಟಲ್ ಸಖಿ ಸಂಯೋಜಕ ಗುರು ಪಿ.ಎಚ್. ಪ್ರಾಸ್ತಾವಿಕ ಮಾತನಾಡಿದರು.
ಭಾಗ್ಯಶ್ರೀ, ಅಂಬಿಕಾ ನಿರೂಪಣೆ ಮಾಡಿದರು. ಸ್ವರೂಪಾ ರಾಣಿ ಪ್ರಾರ್ಥನೆ ಗೀತೆ ಹಾಡಿದರು. ಡಿಜಿಟಲ್ ಸಖಿ ಮಹಾನಂದ ತಡಕಲ್ ಸ್ವಾಗತಿಸಿದರು. ರೇಣುಕಾ ಕಟ್ಟಿಮನಿ ವಂದಿಸಿದರು.
ಗ್ರಾಮೀಣ ಭಾಗದ ಮಹಿಳೆಯರಲ್ಲಿ ತಾಂತ್ರಿಕ ಮತ್ತು ಆರ್ಥಿಕ ಶಿಸ್ತು ಮೂಡಿಸುವುದು, ಕುಟುಂಬದ ಯಜಮಾನಿಗೆ ಅರ್ಥಿಕ ಗುರಿಯಾಗಿದೆ. ಡಿಜಿಲ್ ಸಖಿಯರು ಜಿಲ್ಲೆಯ 72 ಗ್ರಾಮಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
-ಗುರು, ಪಿ.ಎಚ್, ಜಿಲ್ಲಾ ಸಂಯೋಜಕ, ಡಿಜಿಟಲ್ ಸಖಿ, ಕಲಬುರಗಿ