ಕೃತಕ ಬುದ್ಧಿಮತ್ತೆಯ ವಿಚಾರ ಸಂಕಿರಣ ಹಮ್ಮಿಕೊಳ್ಳುವುದು ದೊಡ್ಡ ಪ್ರಯತ್ನ: ಎಸ್.ಎಲ್.ಹಿರೇಮಠ
ಕಲಬುರಗಿ : ಕೃತಕ ಬುದ್ಧಿಮತ್ತೆ, ಸಾಮಾಜಿಕ ಜಾಲತಾಣಗಳು ಮತ್ತು ಸಮಾಜದ ಮೇಲಿನ ಚರ್ಚೆಯನ್ನು ಪ್ರೋತ್ಸಾಹಿಸಲು ಆಯೋಜಿಸಿರುವ ಈ ರಾಷ್ಟ್ರೀಯ ವಿಚಾರ ಸಂಕಿರಣ ಮಹಾವಿದ್ಯಾಲಯದ ದೊಡ್ಡ ಪ್ರಯತ್ನವಾಗಿದೆ ಎಂದು ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ನಿವೃತ್ತ ಕುಲಸಚಿವ ಪ್ರೊ ಎಸ್ ಎಲ್ ಹಿರೇಮಠ ಹೇಳಿದ್ದಾರೆ.
ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸೀರಿ ಮಹಿಳಾ ಮಹಾವಿದ್ಯಾಲಯದಲ್ಲಿ ನಡೆದ ಕೇಂದ್ರ ಸರಕಾರದ ಎಂ ಎಚ್ ಆರ್ ಡಿ ಅಧಿನ ಸಂಸ್ಥೆಯಾದ ಆಯ್ ಸಿ ಎಸ್ ಎಸ್ ಆರ್, ಎಸ್ ಆರ್ ಸಿ ಪ್ರಾಯೋಜಿತ 'ಕೃತಕ ಬುದ್ಧಿಮತ್ತೆ ಸಾಮಾಜಿಕ ಜಾಲತಾಣಗಳು ಹಾಗೂ ಸಮಾಜ' ಎಂಬ ವಿಷಯದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ತಮ್ಮೆಲ್ಲರಿಗೂ ತಿಳಿದಿರುವ ಹಾಗೆ ಇಂದು ತಂತ್ರಜ್ಞಾನವು ನಮ್ಮೆಲ್ಲಾ ಕಾರ್ಯ ಕ್ಷೇತ್ರ ಅಥವಾ ಕೆಲಸದ ಸ್ಥಳಗಳನ್ನು ಪರಿವರ್ತಿಸಿದೆ. ಇದು ಸಂಪರ್ಕವನ್ನು ಸುಧಾರಿಸಿದೆ. ಸಮಯ ಮತ್ತು ತಂತ್ರಜ್ಞಾನವು ಮತ್ತೆ ಪ್ರಮುಖ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡಿದೆ. ಹಾಗಾಗಿ, ಕೃತಕ ಬುದ್ಧಿಮತ್ತೆ ಮತ್ತು ಸಾಮಾಜಿಕ ಜವಾಬ್ದಾರಿ ನಡುವಿನ ಈ ವಿಲೀನವು ಮಾನವ ಸ್ಪರ್ಶದೊಂದಿಗೆ ತಂತ್ರಜ್ಞಾನವನ್ನು ಉತ್ಕೃಷ್ಟಗೊಳಿಸುತ್ತದೆ ಎಂಬುದನ್ನು ನಾನು ಬಲವಾಗಿ ನಂಬಿದ್ದೇನೆ ಎಂದರು.
ನಾವು ಇಂದು ದೈನಂದಿನ ಚಟುವಟಿಕೆಗಳ ಬಹುಭಾಗವನ್ನು ಆಧುನಿಕ ತಂತ್ರಜ್ಞಾನಗಳ ಮೂಲಕ ನಡೆಸುತ್ತಿದ್ದೇವೆ. ನಮ್ಮ ಎಲ್ಲ ಕೆಲಸಗಳಿಗೂ ಒಂದಲ್ಲ ಒಂದು ರೀತಿಯ ಸಾಧನಬೇಕು. ಅದರಲ್ಲಿ ಇತ್ತೀಚಿಗೆ ಹೊಮ್ಮಿಕೊಂಡಿರುವ ಕೃತಕ ಬುದ್ಧಿಮತ್ತೆ ನಮಗೆ ಅರಿವಿಲ್ಲದೆಯೇ ನಮ್ಮ ಸುತ್ತ ಆವರಿಸಿಕೊಂಡಿದೆ ಎಂದು ಹೇಳಿದರು.
'ಎಐ' ಎಂಬ ತಾಂತ್ರಿಕತೆ ನಮಗೇ ತಿಳಿಯದಂತೆ ಹಿನ್ನಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಇಂದಿನ ಕಾಲದಲ್ಲಿ ಮಕ್ಕಳಿಂದ ವಯೋವೃದ್ಧರ ವರೆಗೆ, ಅವಿದ್ಯಾವಂತರಿಂದ ಸುಶಿಕ್ಷಿತರವರೆಗೆ, ಎಲ್ಲರೂ ಯಾವುದೋ ಒಂದು ಕಾರಣಕ್ಕಾಗಿ "ಎಐ' ಶಬ್ದವನ್ನು ತಮ್ಮ ಸಂಭಾಷಣೆಯಲ್ಲಿ ಬಳಸುತ್ತಿರುವುದು ಸಾಮಾನ್ಯವಾಗಿದೆ. ಟಿವಿಯಲ್ಲಿ ಏನಾದರೂ ಅರ್ಥವಾಗದ ವಿಷಯ ಬಂದಾಗ ಅಥವಾ ಮೊಬೈಲ್ನಲ್ಲಿ ಯಾವದೋ ವಿವರಿಸಲು ಕಷ್ಟವಾದ ವಿಷಯ ಎದುರಾದಾಗ, ನಾವು "ಎಐ' ಶಬ್ದವನ್ನು ಬಳಸುವುದು ಸರ್ವೇ ಸಾಮಾನ್ಯವಾಗಿದೆ ಎಂದರು.
ಇಂದು ಎಐ ತಂತ್ರಜ್ಞಾನವು ಈಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚು ಕೆಲವೊಂದು ಕೆಲಸಗಳು ಬದಲಾಗಬಹುದು, ಎಐಯನ್ನು ಬುದ್ದಿಮತ್ತೆಯಿಂದ ಬಳಸುವುದು ಮತ್ತು ಅದರ ಕೌಶಲಗಳನ್ನು ಬೆಳೆಸುವುದು, ಭವಿಷ್ಯದಲ್ಲಿ ನಮ್ಮ ಯಶಸ್ಸಿನ ಕೀಲಿಕೈ ಆಗಿರುತ್ತದೆ. ಎಐನಿಂದ ಬರುವ ಸುಧಾರಣೆಗಳನ್ನು ಸಮರ್ಥವಾಗಿ ಬಳಸಿದಾಗ, ನಮ್ಮ ವೈಯಕ್ತಿಕ ಮತ್ತು ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸಲು ಇದು ಮಹತ್ವದ ಪಾತ್ರವಹಿಸಬಹುದು ಎಂದು ತಿಳಿಸಿದರು.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ಭಾರತವು 'ವಿಶ್ವದ ಗಮ್ಯತಾಣ'ವಾಗಬೇಕು ಎಂದು ನಾವು ಬಯಸುತ್ತೇವೆ. ಹಲವಾರು ಭಾರತೀಯರು ವಿಶೇಷವಾಗಿ ತಂತ್ರಜ್ಞಾನ ನಿಪುಣರು, ವೃತ್ತಿಪರರು, ತಜ್ಞರು ಮತ್ತು ಇಂಜಿನಿಯರ್ಗಳು ಕೃತಕ ಬುದ್ಧಿಮತ್ತೆ ಮೇಲೆ ಈಗಾಗಲೇ ಕೆಲಸ ಮಾಡಿದ್ದಾರೆ. 'ಸಾಮಾಜಿಕ ಸಬಲೀಕರಣಕ್ಕಾಗಿ ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ' ಸಮಾವೇಶವು ವಿಚಾರಗಳು ಮತ್ತು ಸಮಸ್ಯೆಗಳ ಪರಿಹಾರ ಮತ್ತು ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ದೇಶಾದ್ಯಂತ ಹಲವಾರು ಕಾರ್ಯಕ್ರಮಗಳು ಆಯೋಜಿಸಲಾಗುತ್ತಿದೆ ಎಂದರು.
ಮುಂದಿನ ಎರಡು ದಿನಗಳ ಕಾಲ ನಡೆಯುವ ಚರ್ಚೆ ಮತ್ತು ವಿಚಾರ ಮಂಥನಗಳು ಉತ್ತಮ ಸಮಾಜದ ನಿರ್ಮಾಣಕ್ಕೆ ಕ್ರಿಯಾ ಮಾರ್ಗಸೂಚಿಯಾಗಲಿ ಎಂಬ ಆಶಾವಾದದೊಂದಿಗೆ ಈ ಕ್ರಿಯಾ ಮಾರ್ಗಸೂಚಿಯು ಸಮಾಜದ ಜನರ ಜೀವನ ಮತ್ತು ಜೀವನೋಪಾಯಗಳನ್ನು ಪರಿವರ್ತಿಸಲು ಸಹಾಯಕವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಮಾತನಾಡಿ, ಕೃತಕ ಬುದ್ಧಿಮತ್ತೆ ಹಾಗೂ ಸಾಮಾಜಿಕ ಜಾಲತಾಣಗಳು ಮಾನವನ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣದ 107 ಸಂಶೋಧನಾ ಲೇಖನಗಳ 2 ಸಂಪುಟದಲ್ಲಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಕಾಲೇಜಿನ ಸಂಚಾಲಕರಾದ ನಾಗಣ್ಣ ಘಂಟಿ, ಅರುಣಕುಮಾರ ಎಂ ವಾಯ್ ಪಾಟೀಲ, ಅನಿಲಕುಮಾರ ಮರಗೊಳ, ಡಾ ಮಹಾದೇವಪ್ಪ ರಾಂಪೂರೆ, ಡಾ ಶರಣಬಸಪ್ಪ ಹರವಾಳ, ಡಾ ಅನಿಲಕುಮಾರ ಪಟ್ಟಣ, ಸಾಯಿನಾಥ ಪಾಟೀಲ್, ಉಪಪ್ರಾಚರಾದ ಡಾ ವೀಣಾ ಎಚ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ರಾಷ್ಟ್ರೀಯ ವಿಚಾರ ಸಂಕಿರಣ ಸಂಘಟನಾ ಕಾರ್ಯದರ್ಶಿ ಹಾಗೂ ಸಮಾಜಶಾಸ್ತ್ರ ವಿಭಾಗದ ಡಾ. ಮಹೇಶ್ ಕುಮಾರ್ ಗಂವ್ಹಾರ ಪ್ರಾಸ್ತವಿಕವಾಗಿ ಮಾತನಾಡಿದರು, ಪ್ರಾಚಾರ್ಯ ಡಾ. ರಾಜೇಂದ್ರ ಕೊಂಡಾ ಸ್ವಾಗತಿಸಿದರು. ಡಾ.ಉಮಾ ರೇವೂರ, ಡಾ. ಪ್ರೇಮಚಂದ್ ಚವ್ಹಾಣ ನಿರೂಪಿಸಿದರು. ಡಾ.ರೇಣುಕಾ ಎಚ್ ಡಾ ಮುಖಿಮಿಯಾ ಹಾಗೂ ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.