ಪಿಎಂ ಆವಾಸ್ ಯೋಜನೆಯಲ್ಲಿ ಅಕ್ರಮ ಹಣ ಲೂಟಿ : ಈರಣ್ಣಗೌಡ ಪಾಟೀಲ್ ಆರೋಪ

Update: 2024-11-05 11:46 GMT

ಕಲಬುರಗಿ : ಜಿಲ್ಲೆಯ ಜೇವರ್ಗಿ ತಾಲೂಕಿನ ಪಟ್ಟಣದ ಬಡವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ೨೦೧೯-೨೦ರಲ್ಲಿ ೪೦೦ ಮನೆ, ೨೦೨೧-೨೨ರಲ್ಲಿ ೭೫೦ ಮನೆಗಳು ಸೇರಿದಂತೆ ಒಟ್ಟು ೧೧೫೦ ಮನೆಗಳು ಮಂಜೂರಾಗಿದ್ದು,ಇದರಲ್ಲಿ ಒಂದೇ ಒಂದು ಮನೆ ಕಟ್ಟದೇ ಸಂಪೂರ್ಣ ಹಣ ಲೂಟಿ ಮಾಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಈರಣ್ಣಗೌಡ ಪಾಟೀಲ್ ಗುಳ್ಯಾಳ ಆರೋಪಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೇವರ್ಗಿಯ ಸ್ಥಳೀಯ ಶಾಸಕರು, ಸ್ಲಂ ಬೋರ್ಡ್ ಅಧಿಕಾರಿಗಳು, ಇಇ, ಎಇಇ, ಜೆಇ ಹಾಗೂ ಗುತ್ತಿಗೆದಾರರು ಸೇರಿಕೊಂಡು ಸುಮಾರು ಅಂದಾಜು ೭೫ ಕೋಟಿ ರೂಪಾಯಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿರುವ ಅವರು, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ವಸತಿ ಸಚಿವ ಝಮೀರ್ ಅಹ್ಮದ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐ ಅಥವಾ ಸಿಐಡಿಗೆ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ನಾವು ಈಗಾಗಲೇ ಸ್ಲಂ ಬೋರ್ಡ್ ಇಇ ಅವರಿಗೆ ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ದಾಖಲೆಗಳನ್ನು ಪಡೆಯಲು ಅರ್ಜಿ ಸಲ್ಲಿಸಿದ್ದೇವೆ. ಆದರೂ ಕೂಡಾ ಇಲ್ಲಿಯವರೆಗೆ ನಮಗೆ ಯಾವುದೇ ರೀತಿಯ ದಾಖಲೆ ನೀಡಿಲ್ಲ. ಇವೆಲ್ಲವೂ ನೋಡಿದಾಗ ಶಾಸಕರು ಹಾಗೂ ಗುತ್ತಿಗೆದಾರರು ಸೇರಿಕೊಂಡು ಇಷ್ಟೊಂದು ದೊಡ್ಡ ಹಗರಣ ಮುಚ್ಚಿ ಹಾಕಲು ಪ್ರಯತ್ನ ಪಡುತ್ತಿದ್ದಾರೆ ಎಂಬ ಅನುಮಾನಗಳು ಕಾಡುತ್ತಿದ್ದು, ಈಗಾಗಲೇ ಇದರ ಕುರಿತು ತನಿಖೆ ನಡೆಸುವಂತೆ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದೇವೆ. ದೂರು ನೀಡಿ ಒಂದು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮನೆಗಳನ್ನು ಕಟ್ಟಿಸದೇ ಹಣ ಲೂಟಿ ಹೊಡೆದಿರುವ ಕುರಿತು ತನಿಖೆ ನಡೆಸುವಂತೆ ಒಂದು ವಾರದ ಗಡುವು ನೀಡುತ್ತೇವೆ. ಸೂಕ್ತ ತನಿಖೆ ನಡೆಸದೇ ಹೋದಲ್ಲಿ ಪಟ್ಟಣದ ಬಸವೇಶ್ವರ ಸರ್ಕಲ್ನಲ್ಲಿ ಕನ್ನಡ ಪರ, ರೈತ ಪರ ಹಾಗೂ ಪ್ರಗತಿಪರ ಹೋರಾಟಗಾರರ ಬೆಂಬಲದೊಂದಿಗೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೃಷ್ಣ ಜೇವರ್ಗಿ, ಸಾಯಬಣ್ಣಾ ಜೇವರ್ಗಿ, ಶಂಕರ ಹೊನ್ನಾಳ್ಳಿ, ಪರಮೇಶ್ವರ್ ಬಿರಾಳ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News