ಕಲಬುರಗಿ | ನ.24ರಿಂದ ಎರಡು ದಿನ 24ನೇ ಸಿಪಿಐ(ಎಂ) ಜಿಲ್ಲಾ ಸಮ್ಮೇಳನ : ಕೆ.ನೀಲಾ
ಕಲಬುರಗಿ : ಇದೇ ನ.24 ಮತ್ತು 25ರಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)ಪಕ್ಷದ 24ನೇ ಜಿಲ್ಲಾ ಸಮ್ಮೇಳನವು ನಗರದ ಜಗತ್ ವೃತ್ತದಲ್ಲಿ ಜರುಗಲಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಹೇಳಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಸೌಹಾರ್ಧ ಪರಂಪರೆಗಾಗಿ, ನಿರುದ್ಯೋಗ, ಬಡತನ ನಿವಾರಣೆಗಾಗಿ ಹಾಗೂ ದೌರ್ಜನ್ಯ ಮತ್ತು ಹಿಂಸೆಯ ನಿರ್ಮೂಲನೆಗಾಗಿ ಎಂಬ ಮೂರು ಧ್ಯೇಯೋದೇಶಗಳೊಂದಿಗೆ ನಡೆಯಲಿರುವ ಈ ಸಮ್ಮೇಳನವು 24 ರಂದು ಮುಂಜಾನೆ 11 ಗಂಟೆಯಿoದ ನಗರೇಶ್ವರ ಶಾಲೆಯಿಂದ ಮೆರವಣಿಗೆ ಹೊರಟು ಜಗತ್ ವೃತ್ತದಲ್ಲಿ ಸಮಾವೇಶಗೊಂಡು ಅಲ್ಲಿಯೇ ಬಹಿರಂಗ ಸಭೆ ನಡೆಯಲಿದೆ ಎಂದರು.
ಸಮ್ಮೇಳನದಲ್ಲಿ 371 (ಜೆ) ಕುರಿತಾಗಿ ಸಮಗ್ರ ಚರ್ಚೆ, ರೈತರು ಎದುರಿಸುತ್ತಿರುವ ಸಮಸ್ಯೆಗಳು ಸೇರಿದಂತೆ ಹಲವು ವಿಷಯಗಳ ಕುರಿತಾಗಿ ಚರ್ಚೆಗಳು ನಡೆಯಲಿವೆ, ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಪಕ್ಷದ ಕೇಂದ್ರ ಸಮಿತಿ ಸದಸ್ಯರಾದ ಕಾಂ.ರಾಘವಲು ಮತ್ತು ರಾಜ್ಯ ಸಿ ಆಯ್ ಟಿ ಯು ಮುಖಂಡರಾದ ಕಾಂ.ವರಲಕ್ಷ್ಮೀ ಆಗಮಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಮುಹಮ್ಮದ್ ಹಸನ್ ಖಾನ್ ಸ್ಮಾರಕ ಭವನದಲ್ಲಿ ಎರಡು ದಿನಗಳವರೆಗೆ ಪ್ರತಿನಿಧಿ ಅಧಿವೇಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಮ್ಯೂನಿಸ್ಟ್ ಪಕ್ಷಕ್ಕೆ ಜಗತ್ತಿನಾದ್ಯಂತ ಸುದೀರ್ಘ ಇತಿಹಾಸವಿದೆ. ಕಾಯಕ ಜೀವಿಗಳ ಸಮಗ್ರ ಅಭಿವೃದ್ಧಿ ತನ್ಮೂಲಕ ಇಡೀ ಮಾನವ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಇದು ಸೈದ್ಧಾಂತಿಕ ಬದ್ಧತೆಯಿಂದ ಮುಂದುವರೆಯುತ್ತಿದೆ. ದೇಶದಲ್ಲಿ ಎಂದಿಗೂ ರೈತ, ಕಾರ್ಮಿಕರ ಪರವಾಗಿ ಹೋರಾಟ ಮಾಡುತ್ತಿರುವ ಏಕೈಕ ಪಕ್ಷ ನಮ್ಮದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಶ್ರೀಮಂತ ಬಿರಾದಾರ್ ಮತ್ತಿತರರು ಇದ್ದರು.