ಕಲಬುರಗಿ | ಶಿಶು ಪಾಲನಾ ಕೇಂದ್ರಕ್ಕೆ ಜಿಲ್ಲಾ ಪಂಚಾಯತ್ ಸಿಇಓ ಭೇಟಿ
ಕಲಬುರಗಿ : ಜಿಲ್ಲಾ ಪಂಚಾಯತ್ ಕಚೇರಿ ಅವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಶು ಪಾಲನಾ ಕೇಂದ್ರಕ್ಕೆ ಬುಧವಾರ ಜಿಲ್ಲಾ ಪಂಚಾಯತ್ ಸಿಇಓ ಭಂವರ್ ಸಿಂಗ್ ಭೇಟಿ ನೀಡಿ ಕೇಂದ್ರದಲ್ಲಿ ಮಕ್ಕಳ ಪಾಲನೆ ಮಾಡುತ್ತಿರುವ ರೀತಿ ಮತ್ತು ಅಲ್ಲಿನ ಕಾರ್ಯ ಚಟುವಟಿಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಜಗತ್ ವೃತ್ತದ ಜಿಲ್ಲಾ ಪಂಚಾಯತ್ ಕಚೇರಿ ಅವರಣದಲ್ಲಿ ಉದ್ಯೋಗಸ್ಥ ಮಹಿಳೆಯರ ಮಕ್ಕಳ ಆರೈಕೆಗಾಗಿ ಕಳೆದ 2022ರ ಜುಲೈ 5 ರಿಂದ ಕಾರ್ಯನಿರ್ವಹಿಸುತ್ತಿರುವ ವಾತ್ಸಲ್ಯ ಶಿಶುಪಾಲನಾ ಕೇಂದ್ರ ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲಾ ಪಂಚಾಯತ್ ಸಿಇಓ ಭಂವರ್ ಸಿಂಗ್ ಮೀನಾ ಅವರು, ಆಗಾಗ ಶಿಶು ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ಜೊತೆ ಖುಷಿಯಿಂದ ಕೆಲ ಹೊತ್ತು ಕಳೆಯುತ್ತಾರೆ. ಇತ್ತೇಚೆಗೆ ಕೇಂದ್ರದಲ್ಲಿ ಮಕ್ಕಳ ಸ್ನೇಹಿ ಗೋಡೆ ಬರಹ, ಗ್ಯಾಸ್ -ಸಿಂಕ್ ನೀರಿನ ವ್ಯವಸ್ಥೆ, ಅಡುಗೆ ಕೋಣೆ ಪಾರ್ಟೀಶನ, ಬಾಗಿಲು ರಿಪೇರಿಗಳನ್ನು ಸಹ ಮಾಡಿಸುವ ಮೂಲಕ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ.
ಉತ್ತಮ ಆರೋಗ್ಯಕ್ಕಾಗಿ ಕೇಂದ್ರದಲ್ಲಿ ಮಕ್ಕಳಿಗೆ ಹಾಲು, ಡ್ರೈಫ್ರೂಟ್ಸ್, ರಾಗಿ ಗಂಜಿ, ಅನ್ನ, ತರಕಾರಿ ಸಾರು, ಸಜ್ಜಕ್, ಶೇಂಗಾ ಚಿಕ್ಕಿ, ಹೆಸರು ಕಾಳು, ಬಾಳೆ ಹಣ್ಣು, ಹೀಗೆ ದಿನಾಲೂ ವಿವಿಧ ಮೆನು ಪ್ರಕಾರ ಮಕ್ಕಳಿಗೆ ಆಹಾರ ನೀಡಲಾಗುತ್ತದೆ. ಮಕ್ಕಳ ಲಾಲನೆ ಪಾಲನೆ ಜೊತೆಗೆ ಅವರಿಗೆ ಆಟವಾಡಲು ಆಟಿಕೆ ಸಾಮಾನುಗಳು, ತೊಟ್ಟಿಲುಗಳೂ ಹಾಗೂ ಇತರೆ ಎಲ್ಲಾ ಸೌಲಭ್ಯಗಳನ್ನು ಹೊಂದುವ ಮೂಲಕ ಖಾಸಗಿ ಕಿಡ್ಸ್ ಕೇಂದ್ರಗಳಿಗೆ ಸೆಡ್ಡು ಹೊಡೆಯುತ್ತಿದೆ.
ಜಿಲ್ಲಾ ಪಂಚಾಯತ್, ಭೂದಾಖಲೆಗಳ ಇಲಾಖೆ, ಜಿಲ್ಲಾ ನ್ಯಾಯಾಲಯ, ಮಹಾನಗರ ಪಾಲಿಕೆ, ಅಂಚೆ ಕಚೇರಿ, ಆರೋಗ್ಯ, ಶಿಕ್ಷಣ, ಪೊಲೀಸ್ ಇಲಾಖೆ, ಬ್ಯಾಂಕ್, ಜೆಸ್ಕಾಂ ಮುಂತಾದ ಇಲಾಖೆಯಲ್ಲಿನ ಮಹಿಳಾ ನೌಕರರು ತಮ್ಮ ಮಕ್ಕಳನ್ನು ಶಿಶು ಪಾಲನಾ ಕೇಂದ್ರದಲ್ಲಿ ಬಿಟ್ಟು ನಿರಾಳವಾಗಿ ತಮ್ಮ ಕಚೇರಿಗೆ ಹೊರಡುತ್ತಾರೆ. ಕೇಂದ್ರದಲ್ಲಿ ಒಬ್ಬ ಶಿಕ್ಷಕಿ ಮತ್ತು ಇಬ್ಬರು ಸಹಾಯಕಿಯರು ಮಕ್ಕಳ ಲಾಲನೆ ಪಾಲನೆ ಮಾಡುತ್ತಿದ್ದು, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟವು ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿದೆ. ಸುಮಾರು 37 ಮಕ್ಕಳು ಇಲ್ಲಿ ದಾಖಲಾಗಿದ್ದಾರೆ.