ಕಲಬುರಗಿ | ಶೇ.40 ಕಮಿಷನ್ ಬಗ್ಗೆ ಲೋಕಾಯುಕ್ತಕ್ಕೆ ಪತ್ರ ಬರೆದಿರುವುದು ಸುಳ್ಳು : ಜಗನ್ನಾಥ್ ಶೇಗಜಿ ಸ್ಪಷ್ಟನೆ

Update: 2024-11-20 06:37 GMT

ಕಲಬುರಗಿ : ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾಗಿದ್ದ ಕೆಂಪಣ್ಣ ಅವರು ಲೋಕಾಯುಕ್ತಕ್ಕೆ ಶೇ.40 ಕಮಿಷನ್ ಕುರಿತಾಗಿ ಪತ್ರ ಬರೆದಿರುವುದು ಸುಳ್ಳು ಎಂದು ಪ್ರಭಾರ ಅಧ್ಯಕ್ಷ ಜಗನ್ನಾಥ್ ಶೇಗಜಿ ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿಯಲ್ಲಿ ಶೇ.40 ಕಮಿಷನ್ ಕೇಳಿ ಬಂದಿಲ್ಲ ಎಂದು ಲೋಕಾಯುಕ್ತ ವರದಿ ನೀಡಿದ ಕುರಿತಾಗಿ ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ʼಕೆಂಪಣ್ಣ ಮತ್ತು ನಮ್ಮ ಸಂಘದ ಉಪಾಧ್ಯಕ್ಷರಾಗಿದ್ದ ಅಂಬಿಕಾಪತಿಯವರು ನಮ್ಮ ಸಂಘದ ಲೆಟರ್ ಹೆಡ್ ಮೇಲೆ ಲೋಕಾಯುಕ್ತಕ್ಕೆ ಯಾವುದೇ ಪತ್ರ ವ್ಯವಹಾರ ಮಾಡಿರುವುದು ನಮ್ಮ ಸಂಘದಲ್ಲಿ ಉಲ್ಲೇಖವಿಲ್ಲ. ನಾವು ಕೇವಲ ಶೇ.40 ಕಮಿಷನ್ ಬಗ್ಗೆ ಹೇಳಿದ್ದೇವೆ, ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೂ ತಂದಿದ್ದೇವೆ. ಈ ಕಮಿಷನ್ ವಿಚಾರವಾಗಿ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಾಗ ಅವರು ತನಿಖೆಗೆ ನಿವೃತ್ತ ನ್ಯಾಯಮೂರ್ತಿಗಳಾದ ಡಾ.ನಾಗಮೋಹನ್ ದಾಸ್ ಆಯೋಗವನ್ನು ರಚಿಸಿದ್ದರುʼ ಎಂದು ತಿಳಿಸಿದರು.

ʼಬಿಜೆಪಿ ಸರಕಾರದಂತೆ ಕಾಂಗ್ರೆಸ್ ಅವಧಿಯಲ್ಲೂ ಕಮಿಷನ್ ದಂಧೆ ನಡೆಯುತ್ತಿದೆ. ಟೆಂಡರ್ ವೇಳೆ ಕೇವಲ ಒಂದೇ ಪಕ್ಷದ ಶಾಸಕರಲ್ಲದೆ, ಉಳಿದ ಪಕ್ಷದ ಶಾಸಕರೂ ಸಹ ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇವೆ, ಇದರ ಕುರಿತು ಸಿಎಂ ಅವರೊಂದಿಗೆ ಮತ್ತೊಂದು ಸಭೆಯಲ್ಲಿ ಮಾತನಾಡಲಿದ್ದೇವೆʼ ಎಂದರು.

ಈ ಸಂದರ್ಭದಲ್ಲಿ ಮೌಸಿನ್ ಪಟೇಲ್, ಸಂಜೀವ ಆರ್. ಕೆ, ಗುರು ನಂಜಯ್ಯ ಸ್ವಾಮಿ, ರಾಜಶೇಖರ್ ಬುದ್ಧಿವಂತ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News