ಭ್ರಷ್ಟಾಚಾರದಲ್ಲಿ ಮುಳುಗಿದ ಕಾಂಗ್ರೆಸ್ ಸರಕಾರ : ಛಲವಾದಿ ನಾರಾಯಣಸ್ವಾಮಿ ಆಕ್ರೋಶ

Update: 2024-11-21 09:23 GMT

ಕಲಬುರಗಿ : ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 18 ತಿಂಗಳಾದರೂ ಯಾವುದೇ ಅಭಿವೃದ್ಧಿ ಮಾಡದ ಕಾಂಗ್ರೆಸ್ ಸರಕಾರ ಕೇವಲ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ನಗರದ ಐವಾನ್ - ಇ ಶಾಹಿ ಅತಿಥಿಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದು 2 ವರ್ಷಗಳು ಸಮೀಪಿಸುತ್ತಿದ್ದರೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ವಾಲ್ಮೀಕಿ ನಿಗಮದಲ್ಲಿ ಆಗಿರುವ ಅಕ್ರಮ ಹೊರಬಂದಿದೆ, ಬೇರೆ ನಿಗಮಗಳು ಸೇರಿದಂತೆ ಹಲವು ಇಲಾಖೆಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಇತ್ತ ಮುಡಾ ಹಗರಣದ ಆರೋಪ ಹೊತ್ತಿದ್ದರೂ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೇ ಹುದ್ದೆಗೆ ಅಪಚಾರ ಎಸೆಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ತಮ್ಮ ಹಗರಣಗಳನ್ನು ಮುಚ್ಚು ಹಾಕಲು ಮತ್ತು ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲಾಗದೆ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿದ್ದಾರೆ. ಅರ್ಹ ಬಿಪಿಎಲ್ ಕಾರ್ಡುದಾರರ ಪಡಿತರ ಚೀಟಿಗಳನ್ನು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಅನಧಿಕೃತ ಕಾರ್ಡ್‌ಗಳು ಬಂದ್ ಮಾಡಲಿ ಪರವಾಗಿಲ್ಲ, ಆದರೆ ಬಡವರ ಕಾರ್ಡ್ ರದ್ದುಗೊಳಿಸಿರುವುದು ಸರಿಯಲ್ಲ, ರದ್ದುಪಡಿಸಬೇಕಾದರೆ ಮೊದಲು ಕಾರ್ಡ್‌ಗಳನ್ನು ಪರಿಶೀಸಲಿ ಎಂದು ಹೇಳಿದರು.

ಬೆಳಗಾವಿ ಅಧಿವೇಶನದಲ್ಲಿ ಜನರ ಸಮಸ್ಯೆಗಳನ್ನು ಎತ್ತಿ ಹಿಡಿಯುತ್ತೇವೆ. 1 ತಿಂಗಳು ಅಧಿವೇಶನ ನಡೆಯಲಿ, ಪೂರ್ತಿ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಬಸವರಾಜ ಮತ್ತಿಮಡು, ಶಶೀಲ್ ನಮೋಶಿ, ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ಸುಭಾಷ್ ಗುತ್ತೇದಾರ್, ರಾಜಕುಮಾರ್ ಪಾಟೀಲ್ ತೇಲ್ಕುರ್ ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News