ಕಲಬುರಗಿ | ಡಿ.21ಕ್ಕೆ ಶರಣಬಸವ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ : ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ

Update: 2024-12-19 10:50 GMT

ಕಲಬುರಗಿ : ನಗರದ ಶರಣಬಸವ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವ ಡಿ.21ರಂದು ಪೂಜ್ಯ ಡಾ.ಬಸವರಾಜಪ್ಪ ಅಪ್ಪ ಸ್ಮರಣಾರ್ಥ ಭವನದಲ್ಲಿ ನಡೆಯಲಿದೆ ಎಂದು ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶರಣಬಸವಪ್ಪ ಅಪ್ಪಾಜಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ತಿಳಿಸಿದರು.

ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮಹಾಮನೆಯಲ್ಲಿ ವಿವಿಯ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಡಾ.ಅಪ್ಪಾಜಿ ಹಾಗೂ ಡಾ.ಅವ್ವಾಜಿ ಅವರು ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಶರಣಬಸವೇಶ್ವರ ಸಂಸ್ಥಾನದ ಮಹಾಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೂಜ್ಯ ಡಾ.ಅಪ್ಪಾಜಿ ಮತ್ತು ಡಾ.ಅವ್ವಾಜಿ ಮಾತನಾಡಿ, ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಬೆಂಗಳೂರಿನ ಇಸ್ರೋದ ಯು.ಆರ್.ರಾವ್ ಸ್ಯಾಟಲೈಟ್ ಸೆಂಟರ್ನಲ್ಲಿ ಅಪ್ರತಿಮ ವಿಜ್ಞಾನಿಯಾಗಿರುವ ಹಾಗೂ ಇಂಟಿಗ್ರೇಷನ್ ಮತ್ತು ಚೆಕ್ಔಟ್ ಏರಿಯಾದ ಉಪನಿರ್ದೇಶಕ ರಾಮನಗೌಡ ವಿ.ನಾಡಗೌಡ ಸೇರಿದಂತೆ ಒಟ್ಟು ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ ಎಂದರು.

ಈ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯದ ಮತ್ತೊಬ್ಬ ಗೌರವ ಡಾಕ್ಟರೇಟ್ ಪುರಸ್ಕೃತರಾದ ಸದಾಶಿವ ಸ್ವಾಮಿಗಳು ಶಿಕ್ಷಣ ಮತ್ತು ಸಾಮಾಜಿಕ ಕಾರ್ಯ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಮತ್ತೊಬ್ಬ ವ್ಯಕ್ತಿಯಾದ ಬಸವರಾಜ ಕೊನೆಕ ಮತ್ತು ಅವರ ಸಿದ್ದಲಿಂಗೇಶ್ವರ ಬುಕ್ ಮಾಲ್ ಮತ್ತು ಪಬ್ಲಿಷಿಂಗ್ ಹೌಸ್ ಕಲಬುರಗಿ ಜಿಲ್ಲೆಯಲ್ಲಿ ಮನೆಮಾತಾಗಿದೆ. ಸ್ವಯಂ ನಿರ್ಮಿತ ವ್ಯಕ್ತಿ ಕೊನೆಕ ಅವರು ಕನ್ನಡ ಮತ್ತು ಇತರ ಭಾಷೆಗಳಲ್ಲಿ ಪುಸ್ತಕಗಳ ಪ್ರಕಟಣೆಯಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ ಮತ್ತು ಪ್ರದೇಶದ ಬರಹಗಾರರಿಗೆ ತಮ್ಮ ಪುಸ್ತಕಗಳನ್ನು ಪ್ರಕಟಿಸಲು ಅವಕಾಶವನ್ನು ಒದಗಿಸಿದ್ದಾರೆ ಎಂದು ವಿವರಿಸಿದರು.

ಡಾ.ಅಪ್ಪಾಜಿ ಹಾಗೂ ಡಾ.ಅವ್ವಾಜಿ ಮಾತನಾಡಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 174 ವಿದ್ಯಾರ್ಥಿಗಳು ರ್ಯಾಂಕ್ ಪಡೆದು 39 ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದಿದ್ದಾರೆ ಹಾಗೂ ಒಂಭತ್ತು ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಸಾಧನೆಗೆ ವಿವಿಧ ವ್ಯಕ್ತಿಗಳ ಹೆಸರಲ್ಲಿ ನಗದು ಪುರಸ್ಕಾರ ನೀಡಲಾಗುವುದು. ಈ ಘಟಿಕೋತ್ಸವದಲ್ಲಿ 7 ವಿದ್ಯಾರ್ಥಿಗಳಿಗೆ ಪಿಎಚ್.ಡಿ. ಪದವಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಪರ್ಸನ್ ಪೂಜ್ಯ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ, ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ, ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ವಿವಿ ಕುಲಸಚಿವ ಡಾ.ಎಸ್.ಜಿ.ಡೊಳ್ಳೆಗೌಡರ್, ವಿವಿಯ ನಿರ್ದೇಶಕರಾದ ಪ್ರೊ.ವಿ.ಡಿ.ಮೈತ್ರಿ ಮತ್ತು ಎನ್.ಎಸ್.ದೇವರಕಲ್, ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ, ಕುಲಸಚಿವ (ಮೌಲ್ಯಮಾಪನ) ಡಾ.ಎಸ್.ಎಚ್.ಹೊನ್ನಳ್ಳಿ, ಹಣಕಾಸು ಅಧಿಕಾರಿ ಪ್ರೊ.ಕಿರಣ ಮಾಕಾ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು ಮತ್ತು ಎಲ್ಲಾ ವಿಭಾಗಗಳ ಡೀನ್ರು, ಇತರ ಪ್ರಮುಖರು ಹಾಗೂ ಗಣ್ಯರು ಘಟಿಕೋತ್ಸವದಲ್ಲಿ ಉಪಸ್ಥಿತರಿರುತ್ತಾರೆಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

 

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News