ಕಲಬುರಗಿ | ಡಿ.23, 24ರಂದು ಕೃಷಿ ಜಾತ್ರೆ : ಆರ್.ಕೆ.ಪಾಟೀಲ್

Update: 2024-12-19 15:33 GMT

ಕಲಬುರಗಿ : ಡಿ.23 ಮತ್ತು 24 ರಂದು ಎರಡು ದಿನಗಳ ಕಾಲ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದಲ್ಲಿ ಕೃಷಿ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಎಮ್ಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೃಷಿ ವಿಶ್ವವಿದ್ಯಾಲಯ ಕಲಬುರಗಿ, ರಾಯಚೂರು ಕೃಷಿ ವಿಶ್ವವಿದ್ಯಾಲಯ, ಸಮತಾ ಲೋಕ ಶಿಕ್ಷಣ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಡಿ.23 ಹಾಗೂ 24ರಂದು ಎರಡು ದಿನಗಳ ಕಾಲ 'ಕೃಷಿ ಮತ್ತು ನವೋದ್ಯಮ ಯುವಕರಿಗೆ ಹೊಸ ದಿಕ್ಕು' ಎಂಬ ಶೀರ್ಷಿಕೆಯಡಿ ಈ ಕೃಷಿ ಜಾತ್ರೆ ಕಾರ್ಯಕ್ರಮ ಜರುಗಲಿದೆ. ಇದರಲ್ಲಿ ದೇಶದ ಪ್ರಖ್ಯಾತ ವಿಜ್ಞಾನಿಗಳು ಭಾಗವಹಿಸಿದ್ದಾರೆ ಎಂದರು.

ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆಗಳ ನಕಾರಾತ್ಮಕ ಪರಿಣಾಮಗಳನ್ನು ಸಾಕಷ್ಟು ಎದುರಿಸಲಾಗುತ್ತಿದೆ, ಹಾಗಾಗಿ ಲಕ್ಷಾಂತರ ಯುವಕರು ಗ್ರಾಮಗಳನ್ನು ಬಿಟ್ಟು ಪಟ್ಟಣದೆಡೆಗೆ ವಲಸೆ ಹೋಗುತ್ತಿದ್ದಾರೆ. ಇಂತಹ ಪ್ರಕ್ರಿಯೆ ನಡೆಯದಂತೆ ಕೃಷಿಯ ಲಾಭಗಳ ಬಗ್ಗೆ ಯುವಕರಿಗೆ ಅರಿವು ಮೂಡಿಸಲಾಗುವುದು ಎಂದು ತಿಳಿಸಿದರು.

ಕೃಷಿ ಜಾತ್ರೆಯಲ್ಲಿ ಈ ಭಾಗದ ಮುಖ್ಯ ಬೆಳೆಗಳು, ಮಾರುಕಟ್ಟೆ ಸಮೀಕರಣ, ರಪ್ತು ವಹಿವಾಟು, ಎರೆಗೊಬ್ಬರ ಉತ್ಪಾದನೆ, ರೇಷ್ಮೆ ಕೃಷಿ, ಕುರಿ ಮತ್ತು ಮೇಕೆ ಸಾಕಾಣಿಕೆ, ಸೇರಿದಂತೆ ಹಲವು ಕೃಷಿ, ತೋಟಗಾರಿಕೆಯ ಅಭಿವೃದ್ಧಿಯ ಕುರಿತಾಗಿ ಪ್ರಾತ್ಯಕ್ಷಿಕೆಯೊಂದಿಗೆ ಸಮಗ್ರ ಮಾಹಿತಿಗಳನ್ನು ನೀಡಲಾಗುತ್ತದೆ ಎಂದು ಅವರು, ಇದು ಈ ಭಾಗದ ಅತಿದೊಡ್ಡ ಕೃಷಿ ಮೇಳವಾಗಲಿದೆ ಎಂದು ಹೇಳಿದರು.

ಸುಧಾರಿತ ತಂತ್ರಜ್ಞಾನಗಳ ಕುರಿತಾಗಿನ 100 ರಿಂದ 125 ಮಳಿಗೆಗಳು ತಲೆ ಎತ್ತಲಿವೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ 30 ರಿಂದ 40 ಸಾವಿರ ರೈತರು ಈ ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಆರ್.ಕೆ.ಪಾಟೀಲ್ ಮಾಹಿತಿ ನೀಡಿದರು.

ಈ ಬೃಹತ್ ಕೃಷಿ ಮೇಳಕ್ಕೆ ಮುಖ್ಯಮಂತ್ರಿ ಸಲಹೆಗಾರರು, ಆಳಂದ ಶಾಸಕ ಬಿ.ಆರ್.ಪಾಟೀಲ್ ಅವರು ಅಧ್ಯಕ್ಷತೆ ವಹಿಸಲಿದ್ದು, ಉದ್ಘಾಟಕರಾಗಿ ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್ ಆಗಮಿಸಲಿದ್ದಾರೆ. ವಸ್ತು ಪ್ರದರ್ಶನವನ್ನು ಕೆಕೆ ಆರ್ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ನೆರವೇರಿಸುವರು, ಈ ವೇಳೆಯಲ್ಲಿ ಡಾ.ಎಂ.ಧನೋಜಿ, ವಿಜ್ಞಾನಿ ಡಾ.ರಾಜು ತೆಗ್ಗಳ್ಳಿ ಉಪಸ್ಥಿತರಿರುವರು ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಡಾ.ಎಮ್.ಎಮ್ ಧನೋಜಿ, ಡಾ.ರಾಜಶೇಖರ್, ಡಾ.ಮಹಾಂತೇಶ ಜೋಗಿ, ಬಸವಂತರಾಯ ಸೇರಿದಂತೆ ಇತರ ಕೃಷಿ ವಿಜ್ಞಾನಿಗಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News