ಕಲಬುರಗಿ | ಭಾಷೆ, ನಾಡು-ನುಡಿಯ ಬಗ್ಗೆ ಸದಾ ಚಿಂತನೆಯಿರಲಿ: ಸಿದ್ಧರಾಮ ಹೊನ್ಕಲ್
ಕಲಬುರಗಿ : ನಮ್ಮ ಭಾಷೆ, ನಾಡು-ನುಡಿಯ ಬಗ್ಗೆ ಸದಾ ಚಿಂತನೆಯಲ್ಲೇ ಇರಬೇಕು ಎಂದು ಹಿರಿಯ ಸಾಹಿತಿಯೂ ಆಗಿರುವ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಿದ್ಧರಾಮ ಹೊನ್ಕಲ್ ಹೇಳಿದ್ದಾರೆ.
ಅವರು ನಗರದ ಅನ್ನಪೂರ್ಣ ಕ್ರಾಸ್ ಹತ್ತಿರದ ಕಲಾ ಮಂಡಳದಲ್ಲಿ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕವಿಗೋಷ್ಠಿ, ಸಂಗೀತ ಸಂಭ್ರಮ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಕನ್ನಡವನ್ನು ಕೇವಲ ಒಂದು ದಿನ, ತಿಂಗಳು ಬಳಕೆ ಮಾಡದೆ ಅದನ್ನು ಸದಾ ಚಿಂತನಾ ಶೀಲದಲ್ಲಿಡಬೇಕು, ಇದು ಒಂದೇ ತಿಂಗಳಷ್ಟೇ ಅಲ್ಲದೆ ವರ್ಷವಿಡೀ ಸಂಭ್ರಮಿಸಬೇಕು ಎಂದರು.
ಈ ಭಾಗದಲ್ಲಿ ಈವರೆಗೂ ಸಾಹಿತ್ಯ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬಂದಿರಲಿಲ್ಲ, ಇದೀಗ ಆ ಹಸಿವು ಈ ಬಾರಿ ನೀಗಿಸಿದೆ, ಹಾಗಾಗಿ ನಿಮ್ಮ ಕೆಲಸದಲ್ಲಿ ನೀವು ತಲ್ಲೀನರಾಗಿ ಪ್ರಶಸ್ತಿಗಳು ತಾನಾಗಿಯೇ ಬರುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸುರೇಶ್ ಬಡಿಗೇರ ಮಾತನಾಡಿ, 26 ಅಕ್ಷರದ ಭಾಷೆ ಜಗತ್ತು ಆಳುತ್ತದೆ, ಆದರೆ 50 ಅಕ್ಷರದ ನಮ್ಮ ಕನ್ನಡ ಭಾಷೆ ಯಾಕೇ ಜಗತ್ತನ್ನು ಆಳಬಾರದು? ಎಂದು ಪ್ರಶ್ನಿಸಿದರು.
ಜೆಡಿಎಸ್ ಜಿಲ್ಲಾ ವಕ್ತಾರರಾದ ದೇವೆಗೌಡ ತೆಲ್ಲೂರ, ಶಿವಾನಂದ ಖಜೂರ್ಗಿ, ಮಹೇಶ ಹೊಸೂರಕರ್, ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀನಿವಾಸ್ ಸರಡಗಿಯ ಪೂಜ್ಯ ಡಾ.ರೇವಣಸಿದ್ದ ಶಿವಾಚಾರ್ಯರು ವಹಿಸಿದ್ದರು.
ಪ್ರಾಸ್ತಾವಿಕ ಮಾತನಾಡಿದ ಬಿ.ಎಚ್.ನಿರಗುಡಿ, ಕನ್ನಡ ರಾಜ್ಯೋತ್ಸವ ಎನ್ನುವುದು ಕೇವಲ ಒಂದೇ ತಿಂಗಳಿನ ಕಾರ್ಯಕ್ರಮವಲ್ಲ, ಇದು ನಮಗೆ ಪ್ರತಿ ದಿನವೂ ಇರುವಂತೆ ಅಗಬೇಕು, ನಾವೆಲ್ಲರೂ ಕನ್ನಡವನ್ನು ತಾಯಿ ಭಾಷೆಯಾಗಿ ತೆಗೆದುಕೊಂಡಾಗ ಮಾತ್ರ ಅದನ್ನು ಉತ್ಕೃಷ್ಟ ಮಟ್ಟದಲ್ಲಿ ಕಾಣಲು ಸಾಧ್ಯ, ಹಾಗಾಗಿ ನಿತ್ಯವೂ ಕನ್ನಡದ ಧ್ವನಿ ಪಸರಿಸಲಿ ಎಂದು ಹೇಳಿದರು.
ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕವಿಗಳಾದ ಮಂಗಲಾ ಕಪರೆ, ಡಾ.ಸಂಗಣ್ಣ ಸಿಂಗೆ, ಗಂಗಮ್ಮ ನಾಲವಾರ, ರಾಜೇಂದ್ರ ಝಳಕಿ, ಪರ್ವಿನ್ ಸುಲ್ತಾನಾ, ಅಂಬಾರಾಯ ಮಡ್ಡೆ, ರಾಜು ಉದನೂರ, ರೇಣುಕಾ ಹೇಳವರ, ರಾಹುಲ ಕಟ್ಟಿ, ಶಿವಯ್ಯ ಮಠಪತಿ, ಪರಮಾನಂದ ಎಸ್. ಸರಸಂಬಿ, ಸಾಗರ ವಾಘಮೋರೆ ಅವರು ಕವನ ವಾಚನ ಮಾಡಿದರು.
ಸಮಾರಂಭದಲ್ಲಿ ಸಾಧಕರಾದ ಡಾ.ಸಿದ್ದಮ್ಮ ಗುಡೇದ, ಡಾ.ಪುಟ್ಟಮಣಿ ದೇವಿದಾಸ, ಪ್ರೊ.ಯಶವಂತರಾಯ ಅಷ್ಠಗಿ, ರೇಣುಕಾ ಡಾಂಗೆ, ಸೋಮಪ್ಪ ಬಣಗಾರ, ಚಂದ್ರಕಾಂತ ಕರ್ಜಗಿ, ಸಿದ್ದಯ್ಯಶಾಸ್ತ್ರಿ ನಂದೂರಮಠ, ತೀರ್ಥಕುಮಾರ ಬೆಳಕೋಟಾ, ಗೋಪಾಲ ಕುಲಕರ್ಣಿ, ಚಂದ್ರು ಹೀರೆಮಠ, ಭೀಮಾಶಂಕರ್ ಫಿರೋಜಾಬಾದ, ಸಂತೋಷ ಜಿ. ನಾಡಗಿರಿ, ಪರಮೇಶ್ವರ ದುಗುಂಡ, ಶಿವು ದೊಡ್ಡಮನಿ, ಮಲ್ಲಣ್ಣಗೌಡ ಎಸ್. ಪಾಟೀಲ, ವೈಜನಾಥ ತಡಕಲ್, ಅನೀಲಕುಮಾರ ಸಕ್ತಿ, ರಾಜಶೇಖರ ಗೊಣಗಿ, ಡಾ. ಎಸ್.ಎಸ್. ಭಕ್ತಕಂಟಾರ, ಗಿರೀಶ ತುಂಬಗಿ ಮಲ್ಲಿಕಾರ್ಜುನ ಆಲಮೇಲ್ ಅವರಿಗೆ 2024ನೇ ಸಾಲಿನ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.