ಕಲಬುರಗಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ‌ ಪ್ರತಿಮೆ ವಿರೂಪ; ಆರೋಪಿ ಪೊಲೀಸ್ ವಶಕ್ಕೆ

Update: 2024-12-12 05:30 GMT

ಕಲಬುರಗಿ: ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಪ್ರತಿಮೆ ವಿರೂಪಗೊಳಿಸಿದ ಘಟನೆ ಬುಧವಾರ ಬೆಳೆಗಿನ ಜಾವ ಆಳಂದ ಪಟ್ಟಣದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 ಬುಧವಾರ ಬೆಳಗ್ಗೆ 8.30 ಗಂಟೆಯ ಸುಮಾರಿಗೆ ಕುಡಿದ ಅಮಲಿನಲ್ಲಿ ಬೆಳಮಗಿ ಗ್ರಾಮದವನೆನ್ನಲಾದ ವ್ಯಕ್ತಿಯೋರ್ವ ಆಳಂದ ಪಟ್ಟಣದ ಹಳೆಯ ಚೆಕ್‌ಪೋಸ್ಟ್ ಕ್ರಾಸ್‌ನಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ್ದ. ಕುಡುಕನ ಈ ಕೃತ್ಯವನ್ನು ಗಮನಿಸಿ  ಉದ್ರಿಕ್ತರಾದ ಸ್ಥಳೀಯರು ಕೂಡಲೇ ಆಕ್ರೋಶ ಹೊರಹಾಕಿದ್ದು, ಸ್ಥಳಕ್ಕೆ ಧಾವಿಸಿದ ಕರ್ನಾಟಕ ಪ್ರದೇಶ ಕುರುಬರ ಸಂಘದ ಪ್ರಮುಖರು ಕೆಲಕಾಲ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬಳಿಕ ಕುರುಬರ ಸಂಘವು ದೂರು ನೀಡಿದ್ದು, ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ತಾಲೂಕು ಅಧ್ಯಕ್ಷ ಸಿದ್ಧು ಪೂಜಾರಿ, ನಾಗರಾಜ ಘೋಡಕೆ, ಯುವ ಘಟಕದ ಅಧ್ಯಕ್ಷ ಬೀರಣ್ಣಾ ಪೂಜಾರಿ, ಸಂಗೊಳ್ಳಿ ರಾಯಣ್ಣ ಯುವ ಸಂಘದ ಅಧ್ಯಕ್ಷ ಬಾಲಾಜಿ ಘೋಡಕೆ, ಕಲ್ಯಾಣಿ ದೇವಂತಗಿ, ಮಲ್ಲಿಕಾರ್ಜುನ ತೊಗರೆ, ಮಾಂತು ಚಿತಲಿ ಮೊದಲಾದವರು  ಆರೋಪಿಯ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು, ಹೊಸ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಡಿವೈಎಸ್‌ಪಿ ಗೋಪಿ ಬಿ.ಆರ್. ಸಿಪಿಐ ಪ್ರಕಾಶ ಯಾತ್ನೂರ ಮತ್ತು ಸಿಬ್ಬಂದಿ ಪ್ರತಿಮೆ ವಿರೂಪಗೊಳಿಸಿದ್ದಾನೆ ಎನ್ನಲಾದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News