ಕಲಬುರಗಿ | ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹ

Update: 2024-11-25 11:40 GMT

ಕಲಬುರಗಿ : ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರಗಳನ್ನು ನೀಡಬೇಕೆಂದು ಒತ್ತಾಯಿಸಿ, ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದೆ.

ಜಿಲ್ಲೆಯಲ್ಲಿ ಸುಮಾರು 70-80 ವರ್ಷಗಳಿಂದ ಭೂಹೀನ ಮತ್ತು ಬಡರೈತ ಕೃಷಿ ಕಾರ್ಮಿಕರು ಕಂದಾಯ ಹಾಗೂ ಅರಣ್ಯದ ಕುರುಚಲು ಗಿಡ, ಕಲ್ಲು ಭೂಮಿ ಇರುವ ಪ್ರದೇಶಗಳಲ್ಲಿ ತಮ್ಮ ಜೀವನೋಪಾಯಕ್ಕಾಗಿ ಸಾಗುವಳಿ ಮಾಡುತ್ತಿದ್ದಾರೆ. ಬಹುಪಾಲು ರೈತರಿಗೆ ಇದರಿಂದ ಬರುವ ಅಲ್ಪ ಸ್ವಲ್ಪ ವರಮಾನವೇ ಜೀವನಾಧಾರವಾಗಿದೆ. ಇಲ್ಲಿಯವರೆಗೆ ಆಳ್ವಿಕೆ ಮಾಡಿದ ಎಲ್ಲಾ ಸರಕಾರಗಳಿಗೂ ಈ ಬಡ ರೈತರ ಜೀವನದ ವಸ್ತು ಸ್ಥಿತಿಯ ಅರಿವಿದ್ದೇ ಸರಕಾರಕ್ಕೆ ಸೇರಿದ ಜಮೀನಿನಲ್ಲಿ ಉಳುಮೆಗೆ ಅವಕಾಶ ಕೊಡುತ್ತಾ ಬಂದಿದೆ. ಆದರೂ ಶಾಸನಬದ್ದವಾಗಿ ಭೂಮಿಯ ಹಕ್ಕು ದೊರೆಯದೆ ಇರುವುದರಿಂದ ಬಗರ್ ಹುಕುಂ ಸಾಗುವಳಿದಾರಿಗೆ ದಿಕ್ಕು ತೋಚದಂತಾಗಿದೆ. ಹಾಗಾಗಿ ಕೂಡಲೇ ಈ ವ್ಯಾಪ್ತಿಗೆ ಒಳಪಡುವ ರೈತರಿಗೆ ನ್ಯಾಯ ಒದಗಿಸಿಕೋಡಬೇಕೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಬಗರ್ ಹುಕುಂ ಸಾಗುವಳಿದಾರರು ಇಂದಿಗೂ ಕೂಡ ಸಾಮಾಜದಲ್ಲಿನ ಇತರೆ ಜನರಂತೆ ನಿಶ್ಚಿತ ಬದುಕು ರೂಪಿಸಿಕೊಳ್ಳಲಾಗದೆ ದಶಕಗಳಿಂದ ತೀವ್ರ ಮಾನಸಿಕ ತೋಳಲಾಟದಲ್ಲಿ ಒಳಗಾಗಿದ್ದಾರೆ. ಅವರ ಸಮಸ್ಯೆಗಳನ್ನು ಸರಕಾರ ಎಚ್ಚೆತ್ತು ಬಗೆಹರಿಸುವಲ್ಲಿ ನಿರತರಾಗಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಡ ಹೇರಿದರು.

ಈ ಸಾಗುವಳಿದಾರರು ಬಹುತೇಕ ಅನಕ್ಷರಸ್ಥರಾಗಿದ್ದು ಕೃಷಿಯ ಮೇಲೆಯೇ ಅವಲಂಬಿತರಾಗಿದ್ದಾರೆ. ಸಹಜವಾಗಿ ಇವರಿಗೆ ಕೃಷಿ ಬೆಳೆ ಸಾಲ, ಕೃಷಿ ಪರಿಕರ ಮೇಲಿನ ಸಾಲ ಹಾಗೂ ಇನ್ನಿತರ ಜೀವನೋಪಾಯಕ್ಕಾಗಿ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಅಲ್ಪಾವಧಿ ಸಾಲವು ದೊರೆಯದ ಕಾರಣ ಬಹುತೇಕ ಬಡ ರೈತ ಕೃಷಿ ಕಾರ್ಮಿಕರು ಬೇರೆ ದಾರಿಯಿಲ್ಲದೆ ಕೈ ಸಾಲಕ್ಕೆ ಮೊರೆ ಹೋಗಿ ತೀವ್ರ ಸಂಕಟಕ್ಕೆ ಸಿಲುಕಿದ್ದಾರೆ. ಕೆಲವೊಮ್ಮೆ ಇಂತಹ ಪರಿಸ್ಥಿತಿಯು ಅವರನ್ನು ಆತ್ಮಹತ್ಯೆಯಂತಹ ದಾರುಣ ಕೃತ್ಯಕ್ಕೆ ಮೊರೆ ಹೋಗುವಂತೆ ಮಾಡಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಹೀಗಾಗಿ ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರಗಳನ್ನು ನೀಡಿದರೆ ಅವರ ಸಾಮಾಜಿಕ ಬದುಕು ರೂಪಿಸಿದಂತಾಗುತ್ತದೆ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಬಿ.ಭಗವಾನ್ ರೆಡ್ಡಿ ಹೇಳಿದರು.

ಧರಣಿಯಲ್ಲಿ ಸಂಘಟನೆಯ ಜಿಲ್ಲಾ ನಾಯಕರಾದ ವಿಶ್ವನಾಥ್ ಸಿಂಗೆ, ಭಾಗಣ್ಣ ಬುಕ್ಕಾ, ನೀಲಕಂಠ ಎಂ. ಹುಲಿ, ಭೀಮಾಶಂಕರ್ ಆಂದೋಲಾ ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿಯ ಸದಸ್ಯರಾದ ಅಮೃತ್ ಚವಾಣ್, ಶಿವರಾಮ್ ರಾಠೋಡ್, ಶಿವಕುಮಾರ್ ರಾಠೋಡ್, ಬಸವರಾಜ ಪುಜಾರಿ, ಮಲ್ಲಿಕಾರ್ಜುನ ಜಾನೆ, ಶಂಭುಲಿoಗ ಪುಜಾರಿ, ಅಂಬರಾಯ ಹಿರಣಿ, ಬಸವರಾಜ ಗುಡಿ, ಮೀರಾಜ್ ಜೋಗೂರ್, ಬಸವರಾಜ್ ವಾಡಿ, ದೇವು ಕ್ಯಾಸ, ಮೌಲಾ ಮನ್ಯಾಳ್, ಬೈಲಪ್ಪ ಹೆರೂರ್, ಹುಲಿರಾಜ್, ಶೇಖರ್ ಕುರುಬಾಳ್, ಮಲ್ಲಿಕಾರ್ಜುನ್ ಬೈಂಡ್ಲರ್, ಭೀಮರಾಯ ಮುಕ್ಡಿ, ಲಾಲಪ್ಪ, ಭೀಮರಾಯ ಮಡಿವಾಳ್, ಜಗಪ್ಪ, ರವಿ ಭೀಮನಳ್ಳಿ, ತೋಟೇಂದ್ರ ಅಲ್ಲೂರ್, ಭಾಗಪ್ಪ, ಗುರುನಾಥ್ ಯಾಗಾಪುರ್, ದೇವಿಂದ್ರ ರಾಂಪುರ್, ಅಮರೇಶ್ ದುಗನೂರ್, ದೇವೆಂದ್ರ ಬಿಲಕಲ್, ಸಂತೋಷ್ ರಾಠೋಡ್, ಶಶಿಕುಮಾರ್ ಇಟ್ಕಲ್, ದಶರತ್ ಕುಸನೂರ್, ಕಾಶಿಪತಿರವರು ಹಾಗೂ ಇನ್ನಿತರರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News