ರಾಜ್ಯ ಸರಕಾರ ಮತ್ತೆ ಟಿಪ್ಪು ಜಯಂತಿ ಆಚರಿಸಲಿ : ಟಿಪ್ಪು ವಂಶಸ್ಥರಿಂದ ಆಗ್ರಹ

Update: 2024-11-24 16:15 GMT

ಕಲಬುರಗಿ : ರಾಜ್ಯ ಸರಕಾರದಿಂದ 2015ರವರೆಗೆ ಆಚರಿಸಲಾಗುತ್ತಿದ್ದ ಹಝ್ರತ್ ಟಿಪ್ಪು ಸುಲ್ತಾನ್‌ ಜಯಂತಿಯನ್ನು ಬಿಜೆಪಿ ಸರಕಾರ ನಿಲ್ಲಿಸಿದೆ. ಇದೀಗ ಜಯಂತಿಯನ್ನು ಸರಕಾರ ಮತ್ತೆ ಪ್ರಾರಂಭಿಸಬೇಕು ಎಂದು ಟಿಪ್ಪು ಸುಲ್ತಾನ್ ತಹೇರಿಕ್- ಎ- ಖುದಾದಾರ ರಾಷ್ಟ್ರೀಯ ಸಂಘಟನೆಯ ಅಧ್ಯಕ್ಷ, ಟಿಪ್ಪು ಸುಲ್ತಾನ್‌ ಅವರ 7ನೇ ತಲೆಮಾರಿನ ಸಾಹೇಬ್ ಜಾದಾ ಸೈಯ್ಯದ್ ಮನ್ಸೂರ್ ಅಲಿ ಅವರು ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ʼಜಯಂತಿ ಆಚರಿಸುವ ಕುರಿತಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಿದ್ದೇವೆ. ಒಂದು ವೇಳೆ ಅವರು ನಿರಾಕರಿಸಿದರೆ ಉಗ್ರವಾದ ಹೋರಾಟ ಮಾಡುವುದು ಅನಿವಾರ್ಯವಾಗಲಿದೆʼ ಎಂದರು.

ʼಕಳೆದ ನಾಲ್ಕು ವರ್ಷಗಳಿಂದ ಯಾವುದೇ ಸರಕಾರ ಟಿಪ್ಪು ಸುಲ್ತಾನ್‌ ಅವರ ಜಯಂತಿಯನ್ನು ಆಚರಿಸುತ್ತಿಲ್ಲ, ಅದರ ಜೊತೆಗೆ ಖಾಸಗಿಯಾಗಿ ಆಚರಿಸಲು ಸಹ ಪರವಾನಿಗಿ ಕೊಡುತ್ತಿಲ್ಲ. ನ.10ರಂದು ಟಿಪ್ಪು ಸುಲ್ತಾನ್‌ ಅವರ ಶ್ರೀರಂಗಪಟ್ಟಣದಲ್ಲಿರುವ ಸಮಾಧಿ ಸಮೀಪ ಸೆಕ್ಷನ್ 144 ಜಾರಿ ಮಾಡಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ʼರಾಜ್ಯದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ನಿಂತು ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವಲ್ಲಿ ಮುಸ್ಲಿಂ ಸಮುದಾಯ ಪ್ರಮುಖ ಪಾತ್ರವಹಿಸಿದೆ. ಹಾಗಾಗಿ ಮುಸ್ಲಿಂ ಸಮುದಾಯಕ್ಕೆ ಸಂಪುಟದಲ್ಲಿ ಕನಿಷ್ಟ 5 ಜನರಿಗೆ ಸಚಿವ ಸ್ಥಾನ ನೀಡಬೇಕುʼ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಶೇಖ ಮೈನೋದ್ದೀನ್, ಅಲ್ತಾಪ್ ಹುಸೇನ್, ಸೈಯ್ಯದ್ ಮುಸ್ತಕ್ ಅಲಿ, ಅಯ್ಯುಬ್ ಖಾನ್, ಶೇಖ್ ಮನ್ಸೂರ್ ಅಲಿ, ಅಬ್ದುಲ್ ಗನಿ, ಮಲ್ಲಿಕಾರ್ಜುನ ಹೊಸಮನಿ ಮತ್ತಿತರರು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News