ಕಲಬುರಗಿ | ಅನ್ನ ಭಾಗ್ಯ ಯೋಜನೆಯ ಹಣದ ಬದಲಾಗಿ ಪಡಿತರ ಅಕ್ಕಿ ವಿತರಣೆ : ಜಿಲ್ಲಾಧಿಕಾರಿ

Update: 2025-03-17 14:57 IST
ಕಲಬುರಗಿ | ಅನ್ನ ಭಾಗ್ಯ ಯೋಜನೆಯ ಹಣದ ಬದಲಾಗಿ ಪಡಿತರ ಅಕ್ಕಿ ವಿತರಣೆ : ಜಿಲ್ಲಾಧಿಕಾರಿ
  • whatsapp icon

ಕಲಬುರಗಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಅನ್ನ ಭಾಗ್ಯ ಯೋಜನೆಯಡಿ ಪ್ರಸ್ತುತ ಜಿಲ್ಲೆಯಲ್ಲಿರುವ ಅಂತ್ಯೋದಯ ಅನ್ನಭಾಗ್ಯ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ 5 ಕೆ.ಜಿ. ಅಕ್ಕಿ ಬದಲಾಗಿ ನೀಡಲಾಗುತ್ತಿರುವ ಹಣದ ಬದಲಾಗಿ ಕಳೆದ ಫೆಬ್ರವರಿ ಮಾಹೆಯಿಂದ ಜಾರಿಗೆ ಬರುವಂತೆ ಅರ್ಹ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಝಿಯಾ ತರನ್ನುಮ್ ಅವರು ತಿಳಿಸಿದ್ದಾರೆ.

ಸರ್ಕಾರದ ಮಾರ್ಗಸೂಚಿಯಂತೆ ಏಕ ಸದಸ್ಯ, ದ್ವಿ ಸದಸ್ಯ ಮತ್ತು ತ್ರಿ ಸದಸ್ಯ ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿಗಳನ್ನು ಹೊರತುಪಡಿಸಿ ನಾಲ್ಕು ಮತ್ತು ನಾಲ್ಕಕ್ಕಿಂತ ಹೆಚ್ಚು ಸದಸ್ಯರುವುಳ್ಳ ಎಎವೈ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಮತ್ತು ಆದ್ಯತಾ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ 5ಕೆ.ಜಿ ಅಕ್ಕಿ ವಿತರಿಸಲಾಗುವುದು. ಫೆಬ್ರವರಿ ಮಾಹೆಯ ಪಡಿತರ ವಿತರಣಾ ಪ್ರಕ್ರಿಯೆ ಮುಕ್ತಾಯವಾಗಿರುವುದರಿಂದ ಮಾರ್ಚ್ ಮಾಹೆಯ ಪಡಿತರ ವಿತರಣೆಯಲ್ಲಿ ಕಳೆದ ಮಾಹೆಯ ಮತ್ತು ಮಾರ್ಚ್ ಮಾಹೆಯ ಪ್ರತಿ ಸದಸ್ಯನಿಗೆ ತಲಾ 5.ಕೆ.ಜಿ. ಹೆಚ್ಚುವರಿ ಅಕ್ಕಿ ವಿತರಿಸಲಾಗುತ್ತದೆ‌ ಎಂದಿದ್ದಾರೆ.

ಮಾರ್ಚ್ ಮಾಹೆಯಲ್ಲಿ ಅನ್ನ ಭಾಗ್ಯ ಯೋಜನೆಯಡಿ ಅಂತ್ಯೋದಯ ಪಡಿತರರಿಗೆ 1 ರಿಂದ 3 ಸದಸ್ಯರಿರುವ ಕಾರ್ಡಿಗೆ 35 ಕೆ.ಜಿ ಅಕ್ಕಿ, 4 ಸದಸ್ಯರ ಕಾರ್ಡಿಗೆ 45ಕೆ.ಜಿ ಅಕ್ಕಿ, 5 ಸದಸ್ಯರ ಕಾರ್ಡಿಗೆ 65 ಕೆ.ಜಿ ಅಕ್ಕಿ, 6 ಸದಸ್ಯರ ಕಾರ್ಡಿಗೆ 85 ಕೆ.ಜಿ ಅಕ್ಕಿ, 7 ಸದಸ್ಯರ ಕಾರ್ಡಿಗೆ 105 ಕೆ.ಜಿ ಅಕ್ಕಿ, 8 ಸದಸ್ಯರ ಕಾರ್ಡಿಗೆ 125 ಕೆ.ಜಿ ಅಕ್ಕಿ, 9 ಸದಸ್ಯರ ಕಾರ್ಡಿಗೆ 145 ಕೆ.ಜಿ ಅಕ್ಕಿ, 10 ಸದಸ್ಯರ ಕಾರ್ಡಿಗೆ 165 ಕೆ.ಜಿ ಅಕ್ಕಿ, 11 ಸದಸ್ಯರ ಕಾರ್ಡಿಗೆ 185 ಕೆ.ಜಿ ಅಕ್ಕಿ, 12 ಸದಸ್ಯರ ಕಾರ್ಡಿಗೆ 205 ಕೆ.ಜಿ ಅಕ್ಕಿಯನ್ನು, 13 ಸದಸ್ಯರ ಕಾರ್ಡಿಗೆ 225 ಕೆ.ಜಿ ಅಕ್ಕಿ, 14 ಸದಸ್ಯರ ಕಾರ್ಡಿಗೆ 245 ಕೆ.ಜಿ ಅಕ್ಕಿವ ಹಾಗೂ 15 ಸದಸ್ಯರಿರುವ ಕಾರ್ಡಿಗೆ 265 ಕೆ.ಜಿ ಅಕ್ಕಿಯನ್ನು ವಿತರಿಸಲಾಗುವುದು.

ಅದೇ ರೀತಿ ಆದ್ಯತಾ ಪಡಿತರ (ಪಿಹೆಚ್‍ಹೆಚ್/ಬಿಪಿಎಲ್) ಚೀಟಿಯಲ್ಲಿನ ಪ್ರತಿಯೊಬ್ಬ ಸದಸ್ಯರಿಗೆ 15 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಕೊಡಲಾಗುತ್ತಿದ್ದು, ಅರ್ಹ ಪಡಿತರ ಚೀಟಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು‌ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಹಣ ಕೇಳಿದರೆ ದೂರು ನೀಡಿ : ಡಿ.ಸಿ

ಯಾವುದೇ ನ್ಯಾಯಬೆಲೆ ಅಂಗಡಿದಾರರು ವಿತರಣಾ ಪ್ರಮಾಣದಲ್ಲಿ ಸರ್ಕಾರ ನಿಗದಿಪಡಿಸಿದ ಪ್ರಮಾಣದಂತೆ ನೀಡದೆ ಕಡಿಮೆ ಪ್ರಮಾಣದ ಪಡಿತರ ವಿತರಣೆ ಮಾಡಿದ್ದಲ್ಲಿ ಅಥವಾ ಪಡಿತರ ವಿತರಿಸಲು ಹಣ ಕೇಳಿದ್ದಲ್ಲಿ ಸಾರ್ವಜನಿಕರು ನಿಶುಲ್ಕ ಸಹಾಯವಾಣಿ ಸಂಖ್ಯೆ 1967, 1800-425-9339 ಹಾಗೂ 14445ಕ್ಕೆ ಹಾಗೂ ಆಯಾ ತಾಲೂಕಿನ ತಹಸೀಲ್ದಾರ ಕಚೇರಿ ಅಥವಾ ಕಲಬುರಗಿ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರ ಕಚೇರಿಗೆ ದೂರು ಸಲ್ಲಿಸುವಂತೆ ಡಿ.ಸಿ. ತಿಳಿಸಿದ್ದಾರೆ.

ಪಡಿತರ ಮಾರಾಟ ಮಾಡಿದಲ್ಲಿ ರೇಷನ್ ಕಾರ್ಡ್ ರದ್ದು :

ಅನ್ನ ಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ‌ ಉಚಿತವಾಗಿ ವಿತರಿಸಲಾಗುವ ಆಹಾರಧಾನ್ಯವನ್ನು ಹಣಕ್ಕಾಗಿ ಪಡಿತರ ಚೀಟಿದಾರರು ಮಾರಾಟ ಮಾಡುವುದು ಅಥವಾ ಸಂಗ್ರಹಣೆ ಮಾಡುವುದು ಕಂಡುಬಂದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ವಿತರಿಸಲಾದ ಆಹಾರ ಧಾನ್ಯಗಳಿಗೆ ಮುಕ್ತ ಮಾರುಕಟ್ಟೆಯ ದರಕ್ಕೆ ದಂಡವಿಧಿಸಿ ವಸೂಲಿ ಮಾಡಲಾಗುವುದಲ್ಲದೆ ಅವರ ಪಡಿತರ ಚೀಟಿಯನ್ನು ಅಮಾನತ್ತು ಅಥವಾ ರದ್ದುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News